ಋಣ ಪರಿಹಾರ ಕಾಯ್ದೆಯ ಉಪಯೋಗ ಪಡೆದುಕೊಳ್ಳಲು ಸಲಹೆ

Share

ಹಾವೇರಿ: ಖಾಸಗಿ ಲೇವಾದೇವಿ,ಗಿರಿವಿದಾರರಿಂದ ಪಡೆದಂತಹ ಸಾಲದ ಋಣದಿಂದ ಮುಕ್ತಗೊಳಿಸಲು  ಕರ್ನಾಟಕ ಋಣ  ಪರಿಹಾರ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಹಾವೇರಿ ಜಿಲ್ಲೆಯ ಸಣ್ಣ ರೈತರು, ಭೂ ರಹಿತ ರೈತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರು ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುವಂತೆ ಸಹಕಾರಿ ಸಂಘಗಳ ಉಪನಿಬಂಧಕರು ಮನವಿ ಮಾಡಿಕೊಂಡಿದ್ದಾರೆ.

ಜುಲೈ 16, 2019  ರಂದು ಜಾರಿಗೆ ಬಂದಿರುವ ಕರ್ನಾಟಕ ಋಣ ಪರಿಹಾರ ಕಾಯ್ದೆಯು ಒಂದು ವರ್ಷದ ಅವಧಿಗೆ ಮಾತ್ರ ಜಾರಿಯಲ್ಲಿದೆ. ಋಣ ಪರಿಹಾರ ಪಡೆಯಲು ಕಾಯ್ದೆ ಜಾರಿಗೆ ಬಂದ ದಿನಾಂಕದಿಂದ 90 ದಿನದೊಳಗಾಗಿ  ಆಯಾ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಯಲ್ಲಿ ವಾಸಿಸುವ ಸಣ್ಣ ರೈತರು, ಭೂ ರಹಿತ ರೈತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಸಾಲದ ಋಣ ಪರಿಹಾರವನ್ನು ಒದಗಿಸಲು ಸದರಿ ಕಾಯ್ದೆಯು ಉಪಯೋಗವಾಗಿರುತ್ತದೆ.

ಬಡತನದ ಜೀವನ ನಡೆಸುವ ಜನರನ್ನು ಸಾಲ ಋಣಗಳಿಂದ ರಕ್ಷಿಸಿ ಆರ್ಥಿಕ ಸಬಲತೆ ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿ ಜನರ ಬದುಕನ್ನು ಪ್ರಗತಿಯತ್ತಕೊಂಡೊಯ್ಯಲು ಕರ್ನಾಟಕ ಋಣ ಪರಿಹಾರ ವಿಧೇಯಕವು ಒಂದು ಪ್ರಮುಖ ಸಾಧನವಾಗಿದೆ. ಜಿಲ್ಲೆಯ ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದ ಜನರು ಮತ್ತು ಸಣ್ಣ ರೈತರು ಇದರ  ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಸಣ್ಣ ರೈತ ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಎರಡು ಘಟಕಗಳಿಗಿಂತ ಹೆಚ್ಚಿಲ್ಲದ ಜಮೀನನ್ನು ಅದರ ಮಾಲೀಕನಾಗಿ ಗುತ್ತಿಗೆದಾರನಾಗಿ ಅಥವಾ ಅಡಮಾನದಾರನಾಗಿ ಅಥವಾ ಭಾಗಶಃ ಇನ್ನೊಂದರಲ್ಲಿ ತನ್ನ ಸ್ವಾದೀನದಲ್ಲಿ ಹೊಂದಿರುವ ಅದರಿಂದ ಬರುವ ವಾರ್ಷಿಕ ಆದಾಯವು ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳನ್ನು ಮೀರದಿರುವ ಮತ್ತು ಕೃಷಿಯಿಂದಲ್ಲದೆ ಬೇರೆಯಾವ ಮೂಲದಿಂದಲೂ ಆದಾಯವಿಲ್ಲದ ಒಬ್ಬ ವ್ಯಕ್ತಿ. ದುರ್ಬಲ ವರ್ಗಗಳ ಜನರು ಅಂದರೆ ಸಣ್ಣ ರೈತರಲ್ಲದ ಅಥವಾ ಭೂರಹಿತ ಕೃಷಿ ಕಾರ್ಮಿಕರಲ್ಲದ ಅವರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 1.20 ಲಕ್ಷಗಳನ್ನು ಹೊಂದಿರುವ ಜನರು ಈ ಕಾಯ್ದೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಈ ಕಾಯ್ದೆಯು ಜಾರಿಗೆ ಬಂದ ದಿನಾಂಕದಿಂದ 90 ದಿನಗಳೊಳಗಾಗಿ ಆಯಾ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಋಣ ಪರಿಹಾರ ಅಧಿಕಾರಿಗೆ ನಿಗದಿತ ನಮೂನೆಯಲ್ಲಿ ಲೇಣಿದಾರನು ಸಾಲದ ಬಾಕಿ ಇರುವ ವಿವರಗಳುಳ್ಳ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ಸಾಲ ಪಡೆದಿರುವವರ ಪರವಾಗಿ ಜಾಮೀನುದಾರನು ಸಹ ಅಡಮಾನ ಮಾಡಿ ದಚರ/ ಸ್ಥಿರ/ಚಿನ್ನಾಭರಣ ವಾಪಸ್ಸಾತಿಗೆ ಕೋರಿ ಋಣ ಪರಿಹಾರ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಋಣ ಪರಿಹಾರ ಅಧಿಕಾರಿಯು ಖಾಸಗಿ ಲೇವಾದೇವಿಗಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಕಾಯ್ದೆಯಡಿಯಲ್ಲಿ ಪರಿಹಾರ ನೀಡಲು ಅವನು ಅರ್ಹನಾಗಿರುವ ಬಗ್ಗೆ ನಿರ್ಣಯಿಸಿ ಆದೇಶ ಮಾಡಬೇಕಾಗಿರುತ್ತದೆ.

ಈ ಮೂರು ವರ್ಗದ ಜನರು ಕರ್ನಾಟಕ ಋಣ ಪರಿಹಾರ ಕಾಯ್ದೆಯಡಿಯಲ್ಲಿ ಋಣ ಪರಿಹಾರ ಪಡೆಯುವ ಸಂಬಂಧವಾಗಿ ಋಣ ಪರಿಹಾರ ಅಧಿಕಾರಿಯ ಮುಂದೆದಾಖಲಾಗುವ ನಡುವಳಿಯಲ್ಲಿ ಕಾನೂನು ವೃತ್ತಿಪರರು ಹಾಜರಾಗಲು ಕಾಯ್ದೆಯಲ್ಲಿ ಅವಕಾಶವಿರುವುದಿಲ್ಲ. ಋಣ ಪರಹಾರ ಅಧಿಕಾರಿಯು ಋಣ ಪರಿಹಾರ ಕೋರಿ ಬರುವ ಜನರ ಪರವಾಗಿ ಮಾಡಿದ ಆದೇಶ/ ನಿರ್ದೇಶನವನ್ನು ಸಾಲ ನೀಡಿದಂತಹ ವ್ಯಕ್ತಿಯು ಪಾಲಿಸಲು ವಿಫಲನಾದರೆ ಅಂತಹವರಿಗೆ ಒಂದು ವರ್ಷದವರೆಗೆ ಜೈಲು ಹಾಗೂ 1.00 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ.

ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಭಾಡಿಗೆ, ಭೂ ಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವುದೇ ಕಂದಾಯ ತೆರಿಗೆ, ಉಪಕಾರ ನಂಬಿಕೆ ದ್ರೋಹದ ಯಾವುದೇ ಹೊಣೆಗಾರಿಕೆಗೆ ಸಲ್ಲಿಸಿದ ಸೇವೆಗಾಗಿ ಸಂಬಳ ಸರ್ಕಾರಿ ಕಂಪನಿ, ಭಾರತೀಯ ಜೀವ ವಿಮಾ ನಿಗಮ, ಸಹಕಾರ ಸಂಘಗಳು ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳು ಕರ್ನಾಟಕ ಸಹಕಾರ ಸಂಘಗಳ ನೊಂದಣಿ ಕಾಯ್ದೆ 1960 ರ ಅಧಿನಿಯಮ 17 ರಡಿಯಲ್ಲಿ ನೊಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಲ್ಲಿ  ನೊಂದಣಿಗೊಂಡ ಚಿಟ್ ಕಂಪನಿಗಳು ಇವುಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ತಿಳಿಸಿದ್ದಾರೆ.