ಮನೆಹಾನಿ ಮರು ಸರ್ವೇ ಕಾರ್ಯ ಪೂರ್ಣ: ತುರ್ತು ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿ ಸೂಚನೆ

Share

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಹಾನಿಯಾಗಿರುವ ಮನೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದ್ದು, ಹತ್ತು ಸಾವಿರ ರೂ. ತುರ್ತು ಪರಿಹಾರ ಹಣ ಆರ್.ಟಿ.ಜಿ.ಎಸ್. ಮೂಲಕ ಜಮೆ ಮಾಡಲು ಬಾಕಿ ಉಳಿದಿರುವ ಸಂತ್ರಸ್ತರಿಗೆ  ಸೋಮವಾರ ಸಂಜೆಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರಗಳು ತಿಳಿಸಿದರು.

ಮನೆಹಾನಿ ಮರು ಸರ್ವೇ ಕುರಿತಂತೆ ಸೋಮವಾರ ವಿವಿಧ ತಾಲೂಕಾ ಆಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ಪಡೆದರು.

ಪೂರ್ಣ ಪ್ರಮಾಣದ ಕುಸಿದ ಮನೆಗಳು, ಗಂಭೀರ ಸ್ವರೂಪ ಹಾನಿ ಹಾಗೂ ಅರೆ ಕುಸಿದ ಮನೆಹಾನಿಗಳ ಕುರಿತಂತೆ ಸ್ಪಷ್ಟವಾಗಿ ವಿಭಾಗಮಾಡಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪರಿಹಾರ ಪಾವತಿಸಬೇಕಾಗಿದೆ. ಹಾಗೂ ರಾಜೀವ ಗಾಂಧಿ ವಸತಿ ನಿಗಮದ ವೆಬ್‍ಸೈಟ್‍ಗೆ ತುರ್ತಾಗಿ ಅಪ್‍ಲೋಡ್ ಮಾಡಬೇಕು ಹಾಗೂ ಮಾಹಿತಿಯನ್ನು ಅಂತಿಮಗೊಳಿಸುವ ಮುನ್ನ ಇಂಜನೀಯರ್, ನೋಡಲ್ ಅಧಿಕಾರಿಗಳು ಸರ್ವೇಗಾಗಿ ನಿಯೋಜಿತ ಅಧಿಕಾರಿಗಳು ಅಧಿಕೃತತೆ ಕುರಿತಂತೆ ಪ್ರಮಾಣಿಕರಿಸಬೇಕು ಎಂದು ಸೂಚಿಸಿದರು.

ತುರ್ತು ಪರಿಹಾರ ಹಣವನ್ನು ವಿಳಂಬವಿಲ್ಲದೆ ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳ ಖಾತೆಗೆ ಜಮಾಮಾಡಬೇಕು. ಬ್ಯಾಂಕ್ ಖಾತೆ ಅಥವಾ ದಾಖಲೆಗಳ ತಪ್ಪಿನಿಂದ ಖಾತೆಗೆ ಹಣ ಜಮಾವಾಗದಿದ್ದರೆ ತತಕ್ಷಣ ಸ್ಪಂದಿಸಿ ಸರಿಪಡಿಸಬೇಕು ಎಂದು ಸೂಚಿಸಿದರು.

ಹಾನಿ ವಿವರ: ಜಿಲ್ಲೆಯಲ್ಲಿ 159 ಹಳ್ಳಿಗಳು ನೆರೆ ಹಾಗೂ ಅತಿವೃಷ್ಠಿಯಿಂದ ನಷ್ಟ ಅನುಭವಿಸಿದ್ದು, ನಿತ್ಯೋಪಯೋಗಿ ಸಾಮಗ್ರಿಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರದ ಮಾರ್ಗಸೂಚಿಯಂತೆ ಹತ್ತು ಸಾವಿರ ರೂ. ಪ್ರಥಮ ಕಂತಾಗಿ ಪರಿಹಾರ ನೀಡಲು 3924 ಕುಟುಂಬಗಳನ್ನು ಗುರುತಿಸಿದ್ದು, 392 ಲಕ್ಷ ರೂ. ಪರಿಹಾರವನ್ನು ವಿತರಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ 198 ಮನೆಗಳು ಕುಸಿದಿರುವ ಕುರಿತಂತೆ ವರದಿ ಸಲ್ಲಿಕೆಯಾಗಿದ್ದು, ಪರಿಹಾರಕ್ಕಾಗಿ 197.05 ಲಕ್ಷ ರೂ. ಅವಶ್ಯವಿದೆ. 3025 ಮನೆಗಳು ಗಂಭೀರ ಸ್ವರೂಪದ ಹಾನಿಯಾಗಿದ್ದು 2876.77 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ. 10,367 ಅರೇ ಕುಸಿದ ಮನೆಗಳು ಎಂದು ಗುರುತಿಸಲಾಗಿದೆ. ಈ ಮನೆಗಳಿಗೆ 2590.50 ಲಕ್ಷ ರೂ. ಪರಿಹಾರ ಒದಗಿಸಬೇಕಾಗಿದೆ. ಈವರೆಗೆ 390 ಲಕ್ಷ ರೂ. ಪರಿಹಾರ ನೀಡಲಾಗಿದೆ.

1,23,065 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು 9594 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ. 9866 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು 1487.23 ಲಕ್ಷ ರೂ. ಪರಿಹಾರ ಹಣ ನೀಡಬೇಕಾಗಿದೆ. ನದಿಪಾತ್ರ ಪರಿವರ್ತನೆಯಿಂದ 7914 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದ್ದು 2968 ಲಕ್ಷ ರೂ. ಪರಿಹಾರ ಒದಗಿಸಬೇಕಾಗಿದೆ. 5125 ಹೆಕ್ಟೇರ್ ಭೂಮಿಯಲ್ಲಿ ಹೂಳು ತುಂಬಿರುವ ಬಗ್ಗೆ ಸರ್ವೇ ಮಾಡಲಾಗಿದೆ. 625.19 ಲಕ್ಷ ರೂ. ಪರಿಹಾರ ಒದಗಿಸಬೇಕಾಗಿದೆ. 134 ಸೇತುವೆಗಳು ಹಾನಿಯಾಗಿದ್ದು 80.40 ಲಕ್ಷ ರೂ. ದುರಸ್ಥಿಗೆ ಬೇಕಾಗಿದೆ. 122 ಸಣ್ಣ ಕೆರೆಗಳಿಗೆ ಹಾನಿಯಾಗಿದ್ದು 183 ಲಕ್ಷ ರೂ. ದುರಸ್ಥಿಗೆ ಅನುದಾನ ಅವಶ್ಯವಿದೆ. 18.39 ಲಕ್ಷ ರೂ.ನಷ್ಟು ನಗರ ಪ್ರದೇಶದಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳು ಹಾನಿಯಾಗಿವೆ.

2323 ವಿದ್ಯುತ್ ಕಂಬಗಳು, 28.15 ಕಿ.ಮೀ. ವಿದ್ಯುತ್ ಲೈನ್, 172 ಟ್ರಾನ್ಸಫಾರ್ಮರ್ ಹಾಳಾಗಿದ್ದು ಒಟ್ಟಾರೆ ಮರು ಸ್ಥಾಪನೆ 266.87 ಲಕ್ಷ ರೂ.ಬೇಕಾಗಿದೆ. 150 ಕುಡಿಯುವ ನೀರಿನ ಪೈಪ್‍ಗಳ ಸಂಪರ್ಕಗಳು ಹಾಳಾಗಿದ್ದು 225 ಲಕ್ಷ ರೂ. ಅವಶ್ಯವಾಗಿದೆ. 1753 ಸರ್ಕಾರಿ ಶಾಲಾ ಕೊಠಡಿಗಳು, ಅಂಗನವಾಡಿ ಇತರ ಕಟ್ಟಡಗಳು ಹಾನಿಯಾಗಿದ್ದು 1593.73 ಲಕ್ಷ ರೂ. ಮರು ದುರಸ್ಥಿಗೆ ಅನುದಾನ ಬೇಕಾಗಿದೆ. 24 ಆರೋಗ್ಯ ಇಲಾಖೆ ಕಟ್ಟಡಗಳು ಹಾನಿಯಾಗಿದ್ದು 48 ಲಕ್ಷ ರೂ. ದುರಸ್ಥಿಗೆ ಅನುದಾನ ಬೇಕಾಗಿದೆ. 90 ಮೀನುಗಾರಿಕೆ ಬುಟ್ಟಿ, 270 ಮೀನಿನ ಬಲೆಗಳು ಹಾನಿಯಾಗಿದ್ದು, 15.60 ಲಕ್ಷ ರೂ. ಅವಶ್ಯವಾಗಿದೆ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು. 

ವಿಡಿಯೋ ಸಂವಾದದಲ್ಲಿ  ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹಾವೇರಿ ತಹಶೀಲ್ದಾರ ಶಿವಕುಮಾರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪನಿರ್ದೇಶಕ ವಿನೋದ ಹೆಗ್ಗಳಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಹಾವೇರಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ನಪೂರ್ಣ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.