ರೈತಸಿರಿ ಯೋಜನೆ: ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

Share

ಹಾವೇರಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2019-20 ನೇ ಸಾಲಿನ ಸಿರಿಧಾನ್ಯಗಳನ್ನು ಉತ್ತೇಜಿಸಲು “ರೈತಸಿರಿ” ಯೋಜನೆಯನ್ನು ಹಾವೇರಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಪ್ರೋತ್ಸಾಹಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯಲ್ಲಿ ಸಿರಿಧಾನ್ಯಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ರೈತಸಿರಿ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ರೈತಸಿರಿ ಯೋಜನೆಯಡಿ ಹಾವೇರಿ ಜಿಲ್ಲೆಗೆ 1110 ಹೆಕ್ಟೇರ್ ಭೌತಿಕ ಗುರಿ ನಿಗಧಿಪಡಿಸಲಾಗಿರುತ್ತದೆ.

ರೈತಸಿರಿ ಯೋಜನೆಯಡಿ ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‍ಗೆ ಹತ್ತು ಸಾವಿರ ರೂ. ನಗದು ಪ್ರೋತ್ಸಾಹ ಧನವನ್ನು ಎರಡು ಕಂತುಗಳಲ್ಲಿ ನೇರ ಸೌಲಭ್ಯ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‍ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡಲಾಗುವುದು.

ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಜಿ ಸಲ್ಲಿಸಲು ದಿನಾಂಕ 31-08-2019 ವರೆಗೆ ವಿಸ್ತರಿಸಲಾಗಿದೆ. ಆಸಕ್ತ ರೈತರು ಆಯಾ ತಾಲ್ಲೂಕಿನ  ಸಹಾಯಕ ಕೃಷಿ ನಿರ್ದೇಶಕರ ಕಛೇರಿ/ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗಧಿತ ನಮೂನೆಯಲ್ಲಿ ಭರ್ತಿಮಾಡಿದ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಎಂದು ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.