ಜಟ್ಟಿ ಕೆಳಗೆ ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ಮನೋಭಾವನೆ ಡಿಕೆ ಶಿವಕುಮಾರ ಅವರದು: ಸಚಿವ ಬಿಸಿ ಪಾಟೀಲ

ಕೃಷಿ ಸಚಿವ ಬಿ.ಸಿ.ಪಾಟೀಲ

Share

ಹಿರೇಕೆರೂರ: ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಕಾಂಗ್ರೆಸ್ ಶಾಸಕರು ಯಾರು ಪುನಃ ಆ ಪಕ್ಷಕ್ಕೆ ಹೋಗುವುದಿಲ್ಲ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ ಇದೇ ರೀತಿ ಸುಳ್ಳು ಹೇಳಿ ನೆಲಕಚ್ಚಿದ್ದಾರೆ. ಜಟ್ಟಿ ಕೆಳಗೆ ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ಮನೋಭಾವನೆ ಅವರದ್ದು ಎಂದು ಕೃಷಿ ಸಚಿವ ಬಿಸಿ ಪಾಟೀಲ ಟಾಂಗ್ ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ‌‌ ರಾಷ್ಟ್ರಮಟ್ಟದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಬಿಜೆಪಿಗೆ ಬಂದವರು ಯಾರು ವಾಪಸ್ ಕಾಂಗ್ರೆಸ್‌‌ಗೆ ಹೋಗುವ ಪ್ರಮೇಯವೇ ಇಲ್ಲ. ಡಿಕೆಶಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.

ಸಿಬಿಐ ಸ್ವತಂತ್ರ ತನಿತಾ ಸಂಸ್ಥೆಯಾಗಿದ್ದು,ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿದವರ ವಿರುದ್ಧ ತನಿಖೆ ಮಾಡಿದರೆ ಬಿಜೆಪಿ ಸರ್ಕಾರ ಮೇಲೆ ಗೂಬೆ ಕೂರಿಸುತ್ತಾರೆ.
ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮತ್ತೊಂದು ಪಕ್ಷದ ಮೇಲೆ ಗೂಬೆ ಕೂರಿಸೋದು ಸರಿಯಲ್ಲ ಎಂದು ಹೇಳಿದರು.

ರಾಜ್ಯ ಹಾಗೂ ಕೆಂದ್ರದಲ್ಲಿ ರಾಜಕೀಯವಾಗಿ ವಿಫಲವಾಗಲಿದೆ ಎಂದು ಕೋಡಿಹಳ್ಳಿ ಶ್ರೀಗಳು ಈ ಹಿಂದೆ ಹೇಳಿಕೆ ನೀಡಿದ್ದರು. ನೀನು ರಾಜಕೀಯಕ್ಕೆ ಬರಬೇಡ. ನಿನಗೆ ಅದರಲ್ಲಿ ಭವಿಷ್ಯವಿಲ್ಲವೆಂದು ಹೇಳಿದ್ದರು. ಆದರೆ ನಾನು ನಾಲ್ಕು ಬಾರಿ ಶಾಸಕನಾಗಿದ್ದು, ಈ ಬಾರಿ ಸಚಿವನಾಗಿದ್ದೇನೆ. ಅವರು ಹೇಳುವುದು ಬರೀ ಶುದ್ಧ ಸುಳ್ಳು ಎಂದರು‌.

ಆಡಳಿತಾತ್ಮಕ ದೃಷ್ಟಿಯಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಲ್ಲ ಶಾಸಕರನ್ನು ವಿಶ್ವಾಸ ತೆಗೆದುಕೊಂಡು ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿದ್ದಾರೆ. ಹಂಪಿ ಎಂದಾಕ್ಷಣ ಶ್ರೀಕೃಷ್ಣ ದೇವರಾಯರ ನೆನಪು ಬರುತ್ತದೆ. ಅಂತಹ ಮಹಾನ್ ಪುರುಷನ ಹೆಸರಿನಲ್ಲಿ ಜಿಲ್ಲೆ ರಚನೆಯಾಗುತ್ತಿರುವುದು ಸ್ವಾಗತಾರ್ಹ ಎಂದರು‌.

ಈ ಹಿಂದೆ ಧಾರವಾಡ, ರಾಯಚೂರು, ಕೋಲಾರ ಹಾಗೂ ಗುಲಬುರ್ಗಾ ಜಿಲ್ಲೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ವಿಭಜನೆ ಮಾಡಲಾಗಿತ್ತು. ಆಗ ವಿರೋಧ ಮಾಡದವರು ಈಗ ಯಾಕೆ ಮಾಡುತ್ತಿದ್ದಾರೆ ಎಂದರು.