ಹಾವೇರಿ: ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

Share

ಹಾವೇರಿ: ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರ ನಿರ್ದೇಶನದ ಮೇರೆಗೆ ದೇವಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ 100 ಜನ ಮಾಧ್ಯಮ ಪ್ರತಿನಿಧಿಗಳು “ಮೊದಲ ಹಂತದ” ಲಸಿಕೆಯನ್ನು ಪಡೆದುಕೊಂಡರು.

18 ರಿಂದ 45 ಹಾಗೂ 45 ವಯೋಮಾನಕ್ಕಿಂತ ಮೇಲ್ಪಟ್ಟ ಮಾಧ್ಯಮ ಪ್ರತಿನಿಧಿಗಳು ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು. ವಿದ್ಯುನ್ಮಾನ ಮಾಧ್ಯಮ ಕೆಲಸ ನಿರ್ವಹಿಸುವ ವರದಿಗಾರರು, ವಿಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸಂಪಾದಕರು, ಪೋಟೊ ಜರ್ನಲಿಸ್ಟ್ ಲಸಿಕೆ ಪಡೆದುಕೊಂಡರು. ದೇವಗಿರಿ ವೈದ್ಯಾಧಿಕಾರಿಗಳಾದ ಮುಂಜುನಾಥ್ ಹಾಗೂ ಸಿಬ್ಬಂದಿಗಳು ಕಾರ್ಯವನ್ನು ನಿರ್ವಹಿಸಿದರು. ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಾದ್ಯಂತ 100 ಮಾಧ್ಯಮ ಪ್ರತಿನಿಧಿಗಳಿಗೆ ಲಸಿಕೆ ನೀಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಜಯಾನಂದ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ ಇತರ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.