ವಿದೇಶಿ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ಕಲ್ಪಿಸಲು ಚಿಂತನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Share

ಹಾವೇರಿ: ಮುಂಬರುವ ದಿನಗಳಲ್ಲಿ ಪೋಲಿಸರಿಗೆ ವಿದೇಶಗಳ ತಜ್ಞ ತರಬೇತಿದಾರರಿಂದ ತರಬೇತಿ ನೀಡಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಮತ್ತು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೆರೆಮತ್ತಿಹಳ್ಳಿಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 7 ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಪೊಲೀಸ್ ತರಬೇತಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ವಿದೇಶಗಳ ಅತ್ಯುತ್ತಮ ಪೊಲೀಸ್ ತರಬೇತಿ ಶಾಲೆಗಳಿಂದ ನುರಿತ ತರಬೇತಿದಾರರನ್ನು ಆಹ್ವಾನಿ ನಮ್ಮ ಪೊಲೀಸರಿಗೆ ತರಬೇತಿ ಕೊಡಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ದೇಶದ ವಿವಿಧ ರಾಜ್ಯಗಳಲ್ಲಿರುವ ಉನ್ನತ ಪೊಲೀಸ್ ತರಬೇತಿ ಶಾಲೆಗಳಲ್ಲಿ ಕೆಲಕಾಲ ಪೊಲೀಸರಿಗೆ ತರಬೇತಿಗೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು ಇವುಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರತಿ ಕಾನ್‍ಸ್ಟೇಬಲ್‍ಗಳಿಗೂ ಆಧುನಿಕ ತಂತ್ರಜ್ಞಾನದ ತರಬೇತಿ ನೀಡಲು ಪಠ್ಯಕ್ರಮ ಹಾಗೂ ತರಬೇತಿದಾರರನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಬರುವ ಹಣಕಾಸಿನ ವರ್ಷದಲ್ಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಗಳನ್ನು ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಶಾಲೆಗಳಲ್ಲಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ, ಕರಾಟೆ ಹಾಗೂ ಇತರ ಮಹಿಳೆಯರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಒಂದರಿಂದ ಎರಡು ತಿಂಗಳವರೆಗೆ ವಿಶೇಷವಾದ ತರಬೇತಿ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಅವರಿಗೆ ಆತ್ಮಸ್ಥೈರ್ಯ ತುಂಬಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಅರ್ಥಪೂರ್ಣವಾದ ತರಬೇತಿ ಒದಗಿಸುವ ಹಿನ್ನೆಲೆಯಲ್ಲಿ ಸರ್ವಿಸ್‍ನಲ್ಲಿರುವ ಪೊಲೀಸರಿಗೆ ಐದು ವರ್ಷಕ್ಕೊಮ್ಮೆ ತರಬೇತಿ ನೀಡುವ ಚಿಂತನೆಯಿದೆ. ಈ ತರಬೇತಿ ನೀಡಿದಾಗ ಅವರು ಕೂಡಾ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯ. ಇದನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲಾಗುವುದು ಎಂದರು.

ಪೊಲೀಸರು ಬಾಹ್ಯದಲ್ಲಿ ಶಿಸ್ತು, ಕರ್ತವ್ಯ ಪ್ರಜ್ಞೆ ಹಾಗೂ ಆಂತರಿಕವಾಗಿ ಆತ್ಮವಿಶ್ವಾಸ ಮತ್ತು ಚೈತನ್ಯವನ್ನು ತರಬೇತಿ ನೀಡುತ್ತದೆ. ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ದೈಹಿಕ ಸಾಮಥ್ರ್ಯ, ಬುದ್ಧಿಶಕ್ತಿ, ಆಟ-ಪಾಠ, ಕಾನೂನಿನ ಅಂಶಗಳಿರುತ್ತವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ತರಬೇತಿ ಪಡೆದು ಸಮಾಜದ ಶಾಂತಿ ಸುವ್ಯವಸ್ಥೆ ನೆಲೆಗೊಳಿಸಲು ಹಾಗೂ ಸಮಾಜದಲ್ಲಿರುವ ಎಲ್ಲ ಜನರಿಗೂ ನ್ಯಾಯ ಒದಗಿಸುವುದು ಮೀಸಲು ಪಡೆಯ ಕರ್ತವ್ಯ. ಪೊಲೀಸರಿಗೆ ಕಾನೂನು ತಂದೆಯಾದರೆ ನ್ಯಾಯ ನಿಮ್ಮ ತಾಯಿಯಾಗಿರುತ್ತಾಳೆ. ನಿಸ್ಪಕ್ಷಪಾತ ಹಾಗೂ ನ್ಯಾಯಸಮ್ಮತ, ಮಾನವೀಯ ಮಾಲ್ಯಗಳಿಂದ ಕರ್ತವ್ಯ ನಿಭಾಯಿಸಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಶ್ರೇಷ್ಠ ಪೊಲೀಸ್ ಎಂಬ ಹೆಸರು ಪಡೆದು ನಂ 1 ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕರ್ನಾಟಕ ಪೊಲೀಸ್‍ಗೆ ಭವ್ಯಪರಂಪರೆ ಹಾಗೂ ಇತಿಹಾಸವಿದೆ. ಕರ್ನಾಟಕ ಪೊಲೀಸ್‍ನ ಘನತೆ ಹಾಘು ಪರಂಪರೆಯನ್ನು ಎತ್ತಿ ಹಿಡಿವ ಕೆಲಸ ನಿಮ್ಮಿಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಆಕರ್ಷಕ ಪಥಸಂಚಲನ: 99 ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ನಡೆದ ನಿರ್ಗಮನ ಪಥ ಸಂಚಲನವು ಎಲ್ಲರ ಗಮನ ಸೆಳೆಯಿತು. ತೆರೆದ ಜೀಪಿನಲ್ಲಿ ಗೃಹ ಮತ್ತು ಸಹಕಾರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಪಥಸಂಚಲನ ತಂಡದ ಪರೀವಿಕ್ಷಣೆ ಮಾಡಿದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ವರದಾ ಪಡೆ ಶಿರ್ಷಿಕೆಯಡಿ ಕಿರುಚಿತ್ರವನ್ನು ಗೃಹ ಮತ್ತು ಸಹಕಾರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಬ್ಯಾಡಗಿ ಕ್ಷೇತ್ರದ ಶಾಸಕ ವಿರುಪಾಕ್ಷಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿ.ಪಂ. ಸದಸ್ಯ ಸಿದ್ದರಾಜು ಕಲಕೋಟಿ, ಹಾಗೂ ಪೊಲೀಸ್ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.