ಜಿಲ್ಲೆಯ 209 ಗ್ರಾ.ಪಂ.ಗಳಿಗೆ ಎರಡು ಹಂತದಲ್ಲಿ ಚುನಾವಣೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

Share

ಹಾವೇರಿ: ಜಿಲ್ಲೆಯ 209 ಗ್ರಾಮ ಪಂಚಾಯತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಕೋವಿಡ್ ಮಾರ್ಗಸೂಚಿಯಂತೆ ಗ್ರಾಮ ಪಂಚಾಯತಿಗಳ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಮೊದಲ ಹಂಂತದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳ 104 ಗ್ರಾಮ ಪಂಚಾಯತಿಗಳಿಗೆ ಹಾಗೂ ಎರಡನೇ ಹಂತದಲ್ಲಿ ಉಳಿದ ನಾಲ್ಕು ತಾಲೂಕುಗಳ 105 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು‌ ಎಂದರು.

ಮೊದಲ ಹಂತ 104: ಜಿಲ್ಲೆಯ ಮೊದಲ ಹಂತದ ಗ್ರಾಮ ಪಂಚಾಯತಿಗೆ ಡಿ.7 ರಂದು ಹಾಗೂ ಎರಡನೇ ಹಂತದ ಚುನಾವಣೆಗೆ ಡಿ. 11 ರಂದು ಅಧಿಸೂಚನೆ ಜಿಲ್ಲಾಡಳಿತದಿಂದ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಾವೇರಿ ತಾಲೂಕಿನ ತಲಾ 33, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ತಲಾ 19 ಸೇರಿ 104 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

ಎರಡನೇ ಹಂತ 105: ಎರಡನೇ ಹಂತದಲ್ಲಿ ಹಾನಗಲ್ ತಾಲೂಕಿನ 39, ಶಿಗ್ಗಾಂವ ತಾಲೂಕಿನ 27, ಸವಣೂರ ತಾಲೂಕಿನ 21 ಹಾಗೂ ಬ್ಯಾಡಗಿ ತಾಲೂಕಿನ 18 ಸೇರಿ 105 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಮೊದಲ ಹಂತ ಡಿ.7 ರಿಂದ ನಾಮಪತ್ರ: ಮೊದಲ ಹಂತದಲ್ಲಿ ಡಿ.7 ರಂದು ಚುನಾವಣೆ ಅಧಿಸೂಚನೆ. ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ. 12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ. 14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಡಿ. 22 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಡಿ. 24 ರಂದು ನಡೆಸಲಾಗುವುದು. ಮತಗಳ ಎಣಿಕೆ ಡಿ. 30 ರಂದು ಬೆಳಿಗ್ಗೆ 8 ಗಂಟೆಗ ಆಯಾ ತಾಲೂಕಾ ಕೇಂದ್ರಗಳಲ್ಲಿ ಜರುಗಲಿದೆ ಎಂದು ತಿಳಿಸಿದರು.

ಮೊದಲ ಹಂತ ಡಿ.11 ರಿಂದ ನಾಮಪತ್ರ: ಎರಡನೇ ಹಂತದಲ್ಲಿ ಡಿ. 11 ರಂದು ಚುನಾವಣೆ ಅಧಿಸೂಚನೆ. ನಾಮಪತ್ರ ಸಲ್ಲಿಸಲು ಡಿ. 16 ಕೊನೆಯ ದಿನವಾಗಿದೆ. ಡಿ. 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿ. 19 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಡಿ. 27 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಡಿ. 29 ರಂದು ನಡೆಸಲಾಗುವುದು. ಮತಗಳ ಎಣಿಕೆ ಡಿ. 30 ರಂದು ಬೆಳಿಗ್ಗೆ 8 ಗಂಟೆಗ ಆಯಾ ತಾಲೂಕಾ ಕೇಂದ್ರಗಳಲ್ಲಿ ಜರುಗಲಿದೆ ಎಂದು ಹೇಳಿದರು.

1133 ಕ್ಷೇತ್ರಗಳು: ಜಿಲ್ಲೆಯ ಎಂಟು ತಾಲೂಕುಗಳ 209 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಪೈಕಿ 97 ಏಕಸದಸ್ಯ, 298 ದ್ವಸದಸ್ಯ, 482 ತ್ರಿಸದಸ್ಯ, 256 ನಾಲ್ಕು ಸದಸ್ಯರ ಒಳಗೊಂಡ 1133 ಕ್ಷೇತ್ರಗಳು ಒಳಗೊಂಡಿವೆ ಎಂದು ತಿಳಿಸಿದರು.

1380 ಮತಗಟ್ಡೆಗಳು: ಸುಗಮ ಮತದಾನಕ್ಕಾಗಿ 1067 ಮೂಲ ಮತಗಟ್ಟೆ ಹಾಗೂ 313 ಹೆಚ್ಚುವರಿ ಮತಗಟ್ಟೆ ಸೇರಿ 1380 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4,73,254 ಪುರುಷ, 4,39,000 ಮಹಿಳಾ ಹಾಗೂ 27 ಇತರೆ ಮತದಾರರು 9,12,281 ಮತದಾರರಿದ್ದಾರೆ ಎಂದು ವಿವರಿಸಿದರು.

ನೀತಿ ಸಂಹಿತೆ: ಇತರ ಚುನಾವಣೆಗೆ ಅನ್ವಯಿಸುವ ಮಾದರಿ ನೀತಿ ಸಂಹಿತೆ ಗ್ರಾಮ ಪಂಚಾಯತಿ ಚುನಾವಣೆಗೂ ಅನ್ವಯಿಸಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಮೊದಲ ಹಂತದ ತರಬೇತಿ ಪೂರ್ಣಗೊಳಿಸಲಾಗಿದೆ. ರಾಜ್ಯ ಚುನಾವಣಾ ಆಯೋಗದ ನಿಯಮಾನುಸಾರ ಅಭ್ಯರ್ಥಿಗಳಿಗೆ ಮುಕ್ತವಾದ ಚಿಹ್ನೆ ಹಂಚಿಕೆ ಮಾಡಲಾಗುವುದು. ಚುನಾವಣಾ ವೆಚ್ಚದ ಮಿತಿ ಇರುವುದಿಲ್ಲ. ಆದರೆ ಯಾವುದೇ ಆಮಿಷ, ವಸ್ತು ಹಾಗೂ ಹಣದ ಆಮಿಷ ತೋರಿಸಿದರೆ ಕ್ರಮವಹಿಸಲಾಗುವುದು. ಡಿ. 30 ರಿಂದ ಡಿ.31ರ ಸಂಜೆ 5 ಗಂಟೆವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಗಳಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದರು.

ಕೋವಿಡ್ ಮಾರ್ಗ ಸೂಚಿ ಕಡ್ಡಾಯ: ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕೋವಿಡ್-19 ಎಸ್.ಓ.ಪಿ.ಯನ್ನು ಕಡ್ಡಾಯವಾಗಿ ಅನ್ವಯಿಸಲಾಗುತ್ತದೆ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯ. ಅಭ್ಯರ್ಥಿಯು ಐದು ಜನಕ್ಕಿಂತ ಹೆಚ್ಚು ಜನರು ಒಟ್ಟಾಗಿ ಪ್ರಚಾರಕ್ಕೆ ಬಳಸುವಂತಿಲ್ಲ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಮೂರು ಜನಕ್ಕೆ ಮಾತ್ರ ಅವಕಾಶ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಇದ್ದರು.