ಹಿರೇಕೆರೂರು, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನ.11 ರಿಂದ ನಾಮಪತ್ರ ಸಲ್ಲಿಕೆ ಆರಂಭ- ನಾಳೆಯಿಂದ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

Share

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗೆ. ಇದೇ ನವಂಬರ್ 11ರ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಸೋಮವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ನವಂಬರ್ 11ರ ಸೋಮವಾರ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಅಧಿಸೂಚನೆ ಹೊರಡಿಸಲಾಗುವುದು. ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ನವಂಬರ್ 18ರ ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನವಂಬರ್ 19ರ ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನವಂಬರ್ 21ರ ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಡಿಸೆಂಬರ್ 5 ರಂದು ಗುರುವಾರ ಮತದಾನ ಜರುಗಲಿದೆ. ಡಿಸೆಂಬರ್ 9 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸದರಿ ಚುನಾವಣೆಗಾಗಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳಾದ ದೇವರಾಜ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಆಹಾರ ಇಲಾಖೆಯ ಉಪ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಚುನಾವಣಾಧಿಕಾರಿಗಳಾಗಿರುತ್ತಾರೆ. ಅದೇ ರೀತಿ ರಾಣೆಬೆನ್ನೂರು ಮತ್ತು ಹಿರೇಕೆರೂರು ತಾಲ್ಲೂಕುಗಳ ತಹಶೀಲ್ದಾರರು ಸಹಾಯಕ ಚುನಾವಣಾಧಿಕಾರಿ ಗಳಾಗಿರುತ್ತಾರೆ. ಆಯಾ ತಾಲೂಕಾ ತಹಶೀಲ್ದಾರ ಕಚೇರಿಗಳಲ್ಲಿ ನಾಮಪತ್ರ ಸ್ವೀಕಾರ ಮಾಡಲಾಗುವುದು.

ಚುನಾವಣಾ ನೀತಿ ಸಂಹಿತೆಯು ಚುನಾವಣಾ ಆಯೋಗದ ಅಧಿಸೂಚನೆಯೊಂದಿಗೆ ದಿನಾಂಕ 11-11-2019ರಿಂದಲೇ ಜಾರಿಯಲ್ಲಿರುತ್ತದೆ. ಸದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಅನ್ವಯವಾಗುತ್ತದೆ.

ಒಂದುವೇಳೆ ಭಾರತ ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಕಂಡುಬಂದಲ್ಲಿ ನಿಯಮಾನುಸಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾವುಗುವುದು. ಇದಕ್ಕಾಗಿ 25 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, 144 ಸೆಕ್ಟೆರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ರೀತಿ 6 ವಿಡಿಯೋ ಪರಿಶೀಲನಾ ತಂಡಗಳು, 18 ಫ್ಲಾಯಿಂಗ್ ಸ್ಕ್ವಾಡ್, 4 ವೆಚ್ಚ ಪರಿಶೀಲನಾ ತಂಡಗಳು, 2 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಈ ಎರಡು ವಿಧಾನಸಭಾ ಕ್ಷೇತ್ರಗಳನ್ನು ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಒಟ್ಟು 18 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಈ ಚೆಕ ಪೋಸ್ಟ್‍ಗಳು ದಿನದ 24 ತಾಸು ಕಾರ್ಯನಿರ್ವಹಿಸಲಿವೆ. ಪ್ರತಿಯೊಂದು ಚೆಕ್ ಪೋಸ್ಟ್‍ನಲ್ಲಿ ಅಧಿಕಾರಿಗಳ ಜೊತೆಗೆ ಪೊಲೀಸ್ ಹಾಗೂ ಅಬಕಾರಿ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಸಿ.ಸಿ. ಟಿ ವಿ ಕ್ಯಾಮರಾ ಸ್ಥಾಪಿಸಲಾಗಿದೆ.

ಸದರಿ ಉಪ ಚುನಾವಣೆಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ ಮತದಾರರ ಪಟ್ಟಿಯನ್ನೇ ಬಳಸಲಾಗುವುದು. ಸದರಿ ಚುನಾವಣೆಗೆ ಮತದಾರರಾಗಲು ದಿನಾಂಕ:01-01-2019 ಅರ್ಹತಾ ದಿನಾಂಕವಾಗಿದ್ದು, ಅರ್ಹ ಮತದಾರರು ಹೆಸರು ಸೇರಿಸಲು ಅವಕಾಶವಿದೆ. ಸದ್ಯಕ್ಕೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,18,396 ಪುರುಷ, 1,14,076 ಮಹಿಳಾ ಹಾಗೂ 13 ಇತರೇ ಮತದಾರರು ಸೇರಿ ಒಟ್ಟು 2,32,485 ಮತದಾರರಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ 94,238 ಪುರುಷ, 88,554 ಮಹಿಳಾ ಹಾಗೂ 04 ಇತರೇ ಮತದಾರರು ಸೇರಿ ಒಟ್ಟು 1,82,796 ಮತದಾರರಿದ್ದಾರೆ. ಮತದಾರರಿಗೆ ಮತದಾನ ಮಾಡಲು ಅರಿವು ಮೂಡಿಸುವ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಹಾವೇರಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯನ್ನು ರಚಿಸಲಾಗಿದೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು 229 ಮತ್ತು ರಾಣೆಬೆನ್ನೂರು 266 ಮತಗಟ್ಟೆಗಳನ್ನು ಹೊಂದಿದ್ದು, ಸದರಿ ಮತಗಟ್ಟೆಗಳಲ್ಲಿ ಮತದಾನ ಜರುಗಿಸಲು ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮಾಹಿತಿಯನ್ನು ಪಡೆದು ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಪ್ರತಿ ಮತಗಟ್ಟೆಗೆ ತಲಾ 4 ಸಿಬ್ಬಂದಿಗಳಂತೆ 10% ಸಿಬ್ಬಂದಿಗಳನ್ನು ಕಾಯ್ದಿರಿಸಿ ಚುನಾವಣೆಯನ್ನು ಜರುಗಿಸಲು ನೇಮಕ ಮಾಡಲಾಗುವುದು. ಚುನಾವಣಾ ಸಿಬ್ಬಂದಿಗಳನ್ನು ಚುನಾವಣೆ ನಡೆಯುವ ತಾಲ್ಲೂಕುಗಳನ್ನು ಹೊರತುಪಡಿಸಿ ಬೇರೆ ತಾಲ್ಲೂಕಿನಿಂದ ನೀಡಲಾಗುವುದು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿಸಲು ಅಂPಈ’s/ಅಂP’s ಪಡೆಗಳ ಜೊತೆಗೆ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಲಭ್ಯವಿರುವ ಎಲ್ಲ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲು ಯೋಜನೆಯನ್ನು ರೂಪಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡಲು ಅಥವಾ ಚುನಾವಣೆಯ ಮಾಹಿತಿ ಪಡೆಯಲು ಸಾರ್ವಜನಿಕರ ಅನುಕೂಲಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ವ್ಯಾಪ್ತಿಯಲ್ಲಿರುವವರು ಟೋಲ್ ಫ್ರೀ ನಂಬರ್ 1950 ನೇರವಾಗಿ ಹಾಗೂ ಜಿಲ್ಲೆ ಹೊರಗೆ ಇರುವವರು ಜಿಲ್ಲೆಯ ಎಸ್‍ಟಿಡಿ ಕೋಡ್ 08375 ಉಪಯೋಗಿಸಿ ಅದರೊಂದಿಗೆ 1950 ಸಂಖ್ಯೆಯನ್ನು ಡೈಲ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.