ಧಾರವಾಡ ಲಾಕ್​ಡೌನ್​ನಲ್ಲಿ ನಾಳೆಯಿಂದ ವಿನಾಯಿತಿ

Share

ಹುಬ್ಬಳ್ಳಿ , ಜೂನ್ 6: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಇಳಿಮುಖ ಆಗುತ್ತಿರುವುದರಿಂದ ಜೂ. 7 ರಿಂದ ಲಾಕ್​ಡೌನ್ ನಿಯಮಗಳಲ್ಲಿ ಅಲ್ಪ ವಿನಾಯಿತಿ ನೀಡಲು ನಗರದ ರ್ಸಟ್​ಹೌಸ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ವನಿಸಲಾಯಿತು.

ಸದ್ಯ ಹಾಲು, ತರಕಾರಿ ಸೇವೆಗಳಿಗೆ ಮಾತ್ರ ಬೆಳಗ್ಗೆ 6ರಿಂದ 8ಗಂಟೆವರೆಗೆ ಅವಕಾಶವಿದೆ. ಈ ಸಮಯವನ್ನು ಬೆಳಗ್ಗೆ 10 ಗಂಟೆಯವರೆಗೆ ವಿಸ್ತರಿಸಿ ಹಾಲು, ತರಕಾರಿ, ಕಿರಾಣಿ ಅಂಗಡಿ, ಹೋಟೆಲ್ ಹಾಗೂ ಮದ್ಯ ಅಂಗಡಿಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡಲು, ಹೋಟೆಲ್​ಗಳ ಮೂಲಕ ಹೋಂ ಡೆಲಿವರಿಗೆ ರಾತ್ರಿ 8ರವರೆಗೆ ಸಮಯಾವಕಾಶ ನೀಡುವಂತೆ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.

ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಲಸಿಕೆ ಕಾರ್ಯ ಚುರುಕು ಗೊಳಿಸಲು, ಆದ್ಯತೆ ಮತ್ತು ದುರ್ಬಲ ವರ್ಗದವರಿಗೆ ಕಡ್ಡಾಯವಾಗಿ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಹಣ್ಣು ಬೆಳೆಗಾರರಿಗೆ 1,08,64,487 ರೂ. ಹಾಗೂ ತರಕಾರಿ ಬೆಳಗಾರರಿಗೆ 55,400 ರೂ. ಬಿಡುಗಡೆಯಾಗಿದೆ. ಹೂವು ಬೆಳೆಗಾರರಿಗೆ 10,73,529 ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪೊಲೀಸ್ ಆಯುಕ್ತ ಲಾಭೂರಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಸುಶೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ಇತರರಿದ್ದರು.