ಕಿಮ್ಸ್​ನಲ್ಲಿ ಸೋಂಕಿತರ ಎದುರೇ ಮೃತದೇಹಗಳ ಪ್ಯಾಕಿಂಗ್

Share

ಹುಬ್ಬಳ್ಳಿ, ಮೇ 27: ಕೊರೊನಾ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಎದುರಲ್ಲೇ, ಮೃತದೇಹಗಳನ್ನ ಪ್ಲಾಸ್ಟಿಕ್​ ಬ್ಯಾಗ್​​ನಲ್ಲಿ  ಪ್ಯಾಕ್​ ಮಾಡಲಾಗುತ್ತಿರೋ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಆಸ್ಪತ್ರೆಯ ಸಿಬ್ಬಂದಿ ಮೃತದೇಹವನ್ನು ಪ್ಲಾಸ್ಟಿಕ್​​ ಕವರ್​​ನಲ್ಲಿ ಪ್ಯಾಕಿಂಗ್​ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ವೇಳೆ ಸಿಬ್ಬಂದಿಯೂ ಕೂಡ ಪಿಇಇ ಕಿಟ್​​ ಧರಿಸದೆ ಕಾರ್ಯ ನಿರ್ವಹಿಸುತ್ತಿರುವುದನ್ನು ಕೂಡಾ  ಕಾಣಬಹುದಾಗಿದೆ.

ಒಬ್ಬರು ಕೇಂದ್ರ ಮಂತ್ರಿ, ಮತ್ತೊಬ್ಬರು ರಾಜ್ಯ ಮಂತ್ರಿ ಪ್ರತಿನಿಧಿಸುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದುಸ್ಥಿತಿ. ಭಯ ಹೆಚ್ಚಿಸುವ ರೀತಿಯಲ್ಲಿ ಸೋಂಕಿತರ ಎದುರೇ ಶವಕ್ಕೆ ಪ್ಲಾಸ್ಟಿಕ್ ಪ್ಯಾಕಿಂಗ್ ಮಾಡಲಾಗುತ್ತಿದೆ. ಪಿಪಿಇ ಕಿಟ್ ಸುರಕ್ಷೆ ಸಿಬ್ಬಂದಿಗೂ ಇಲ್ಲ, ಶವಕ್ಕೂ ಇಲ್ಲ. ಇದೇನಾ ನಿಮ್ಮ ಸಾಧನೆ? ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್​ ಜೋಶಿ ಹಾಗೂ ರಾಜ್ಯ ಸಚಿವರಾದ ಜಗದೀಶ್​ ಶೆಟ್ಟರ್​ ಅವರಿಗೆ ಟ್ಯಾಗ್​ ಮಾಡುವ ಮೂಲಕ ಕಾಂಗ್ರೆಸ್​ ಕಿಡಿ ಕಾರಿದೆ.

ಕಾಂಗ್ರೆಸ್​ ಹಂಚಿಕೊಂಡಿರುವ ವಿಡಿಯೋ 15 ದಿನಗಳ ಹಿಂದೆ ನಡೆದಿದ್ದ ಘಟನೆಯ ದೃಶ್ಯಗಳು ಎನ್ನಲಾಗಿದೆ. ಈ ಕುರಿತು ಸಚಿವರ ಗಮನಕ್ಕೆ ಬರುತ್ತಿದಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಮುಂದೆ ಇಂತಹ ತಪ್ಪು ನಡೆಯದಂತೆ ಖಡಕ್​ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.