ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ: ಕೃಷಿ ಸಚಿವ ಬಿಸಿ ಪಾಟೀಲ

Share

ಬೆಂಗಳೂರು: ರಾಜ್ಯ ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ವಿಶ್ವವಿದ್ಯಾಲಯಗಳಿಗೆ 2020-21ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿಗಳಿಗೆ ಆನ್ಲೈನ್ ಮೂಲಕ ಕೃಷಿಕರ ಕೋಟಾದಡಿಯಲ್ಲಿ ಪ್ರವೇಶಾತಿ ಮೂಲ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಸಿಇಟಿ 2020 ರಲ್ಲಿ ರ‌್ಯಾಂಕ್ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಅಗಸ್ಟ್ 29 ರೊಳಗೆ ಕೃಷಿ ಕೋಟಾದಡಿ ಅರ್ಹತೆ ಪಡೆಯಲು ಮೂಲ ದಾಖಲೆಗಳನ್ನು ಅಪ್ಲೋಡ್ ಮಾಡದೇ ಇರುವ ಅಭ್ಯರ್ಥಿಗಳಿಗೂ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮೂಲದಾಖಲೆಗಳನ್ನು ಇಲ್ಲಿಯವರೆಗೆ ಅಪ್ಲೋಡ್ ಮಾಡದೇ ಇರುವ ಅಭ್ಯರ್ಥಿಗಳು ಸೆಪ್ಟೆಂಬರ್ 25 ರಿಂದ 29 ರೊಳಗೆ ಸಂಬಂಧಪಟ್ಟ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿದ್ದು, ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿದ ದಾಖಲೆಗಳನ್ನು ಅಪ್ಲೊಡ್ ಮಾಡಲು ಸೆಪ್ಟೆಂಬರ್ 29 ಕೊನೆಯ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಆದಷ್ಟು ಬೇಗ ಅಂತಿಮ‌ ದಿನದೊಳಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಈ ಅವಕಾಶವನ್ನು ಸದ್ಬಳಕೆ ಮಾಡುವಂತೆ ಸಚಿವರು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೇ ಈ ಮೊದಲು ಶುಲ್ಕ ಪಾವತಿಸಿ ಕೃಷಿ ಕೋಟಾದಡಿ ಪ್ರವೇಶಾತಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಅನರ್ಹರಾದ ಅಭ್ಯರ್ಥಿಗಳಿಗೂ ಮತ್ತೊಂದು ಅವಕಾಶ ಕಲ್ಪಿಸಿಕೊಡಲಾಗಿದ್ದು, ಸಂಬಂಧಪಟ್ಟ ಆಯಾ ಕೃಷಿ ವಿದ್ಯಾವಿದ್ಯಾಲಯ ಪರಿಶೀಲನಾ ಕೇಂದ್ರಗಳಿಗೆ ಅಭ್ಯರ್ಥಿಗಳು ಖುದ್ದು ಭೇಟಿ ನೀಡಿ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಪರಿಶೀಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.