ಹೆಚ್.ಟಿ ಹತ್ತಿ ಬೀಜ ಮಾರಾಟ ಮಾಡಿದರೆ ಕಠಿಣ ಕ್ರಮ

Share

ಹಾವೇರಿ: ಹೆಚ್.ಟಿ ಹತ್ತಿಗೆ ಭಾರತ ಸರ್ಕಾರದಿಂದ ಮಾನ್ಯತೆ ದೊರೆಕಿರುವುದಿಲ್ಲ. ಕಾರಣ ಜಿಲ್ಲೆಯಲ್ಲಿನ ಕೃಷಿ ಪರಿಕರ ಮಾರಾಟಗಾರರು ಅನಧಿಕೃತವಾಗಿ ಹೆಚ್.ಟಿ ಹತ್ತಿ ಬೀಜ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಮಾರಾಟ ಪರವಾನಗಿಯನ್ನು ಅಮಾನತು/ರದ್ದು ಪಡಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿರುತ್ತವೆ. ಜಿಲ್ಲೆಯಲ್ಲಿ ಹತ್ತಿ ಎರಡನೇ ಪ್ರಮುಖ ಬೆಳೆಯಾಗಿದ್ದು ಸುಮಾರು 55 ಸಾವಿರದಿಂದ 75 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್.ಟಿ.ಹತ್ತಿ (Herbicide-tolerant ಹತ್ತಿ/ ಕಳೆನಾಶಕ ನಿರೋಧಕ ಹತ್ತಿ) ಯು ಅನಧಿಕೃತವಾಗಿ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣಗಳಿಂದ ಬೀಜ ಸಾಗಾಣಿಕೆಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ರೈತರು ಹತ್ತಿ ಬೀಜ ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕು ಹಾಗೂ ಹೆಚ್.ಟಿ ಹತ್ತಿ ಬೀಜ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತದಲ್ಲಿ ತಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತರಲು ತಿಳಿಸಿದ್ದಾರೆ.