ಹಾವೇರಿ: ಮತ್ತೆ 3 ಮಂದಿಗೆ ಕೊರೊನಾ ಸೋಂಕು ದೃಢ

Share

ಹಾವೇರಿ: ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಗೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಮುಂಬೈನಿಂದ ಹಾವೇರಿಗೆ ಬಂದಿದ್ದ ಮೂಲತಃ ಗಣಜೂರಿನ 50 ವರ್ಷದ P-5002 ಮಹಿಳೆ ಹಾಗೂ 45 ವರ್ಷದ ಸಂಗೂರಿನ P-5003 ಪುರುಷ ಹಾಗೂ 27 ವರ್ಷದ ಗುತ್ತಲದ P-5004ಮಹಿಳೆಗೆ ಶನಿವಾರ ಕೋವಿಡ್ ದೃಢಪಟ್ಟಿದೆ.

ಈ ಪೈಕಿ ಗಣಜೂರ ಹಾಗೂ ಸಂಗೂರಿನ ಸೋಂಕಿತರು ಮಹಾರಾಷ್ಟ್ರ ರಾಜ್ಯದಿಂದ ಹಾವೇರಿಗೆ ಬಂದು ನಗರದ ವಿದ್ಯಾರ್ಥಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಿದ್ದರು. ಗುತ್ತಲದ 27 ವರ್ಷದ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಹಾವೇರಿ ಜಿಲ್ಲೆಯ ಗುತ್ತಲಕ್ಕೆ ಆಗಮಿಸಿದ್ದರು. ಸೋಂಕಿತರನ್ನು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 21 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂಡಿದ್ದಾರೆ. 15 ಪ್ರಕರಣಗಳು ಸಕ್ರಿಯವಾಗಿವೆ.

ಕಂಟೋನ್ಮೆಂಟ್-ಬಫರ್ ಜೋನ್ ಘೋಷಣೆ:
ಗುತ್ತಲದ ಆಕೆ ವಾಸವಿರುವ ಗೋಕಟ್ಟೆ ಹೊಂಡದ ಹತ್ತಿರ ಕಲಾಲ್ ಪ್ಲಾಟ್ ವಾರ್ಡ್ 02ರಲ್ಲಿರುವ ಎಲ್ಲ 65 ಮನೆಗಳನ್ನು ಒಳಗೊಂಡ ಪ್ರದೇಶವನ್ನು 100 ಮೀಟರ್ ಒಳಗಿನ ಕಂಟೋನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಶಾಂತಿ ನಗರ ಮತ್ತು ವಾಲ್ಮೀಕಿನಗರ, ಬೆಳವಿಗಿ ರಸ್ತೆ ವ್ಯಾಪ್ತಿಯ 200 ಪ್ರದೇಶವನ್ನು ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಹಾವೇರಿ ಉಪವಿಭಾಗಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

P-5002 ಹಾಗೂ P-5003 ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ ಹಾವೇರಿ ನಗರದ ಮೆಟ್ರಿಕ್ ನಂತರದ ವಸತಿ ನಿಲಯ (ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ) ಕ್ವಾರಂಟೈನ್ ಸೆಂಟರ್‍ನ 100 ಮೀಟರ್ ಒಳಗಿನ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಡಿಪೋ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಹಾವೇರಿ ಉಪವಿಭಾಗಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.