ಹಾವೇರಿ ಜಿಲ್ಲೆಯ ಆರು ಕೋವಿಡ್ 19 ಸೋಂಕಿತರಲ್ಲಿ ಓರ್ವ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

Share

ಹಾವೇರಿ: ಜಿಲ್ಲೆಯ ಸವಣೂರಿನ ಎಸ್.ಎಂ.ಕೃಷ್ಣ ನಗರದ 40 ವರ್ಷದ ವ್ಯಕ್ತಿಯು (P -672) ನಿಗದಿತ ತಪಾಸಣೆ ಹಾಗೂ ಚಿಕಿತ್ಸೆ ಪಡೆದು ಕೋವಿಡ್ 19 ಸೋಂಕಿನಿಂದ ಸಂಪೂರ್ಣ ಗುಣಮುಖನಾದ ಹಿನ್ನಲೆಯಲ್ಲಿ ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಣಮುಖಗೊಂಡ ವ್ಯಕ್ತಿ 14 ದಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದು ಗುಣಮುಖವಾದ ಬಗ್ಗೆ ಪ್ರಯೋಗಾಲಯದ ವರದಿ ಬಂದ ಹಿನ್ನಲೆಯಲ್ಲಿ ಆತನನ್ನು ನಿಗದಿತ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ ಈ ವ್ಯಕ್ತಿಯನ್ನು ಮುಂದಿನ 14 ದಿನಗಳು ಗೃಹ ಪ್ರತ್ಯೇಕತೆಯಲ್ಲಿರಿಸಿ ವೈದ್ಯಕೀಯ ನಿಗಾವಹಿಸಲಾಗುವುದು ಎಂದರು.

ಚಿಕಿತ್ಸೆ ಪಡೆದು ಕೋವಿಡ್ 19 ಸೋಂಕಿನಿಂದ ಸಂಪೂರ್ಣ ಗುಣಮುಖನಾದ ಸವಣೂರು ಪಟ್ಟಣದ ನಿವಾಸಿಯನ್ನು ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಗುಲಾಬಿ ಹೂ ನೀಡಿ ಬಿಳ್ಕೊಟ್ಟರು

ಗುಣಮುಖವಾದ ವ್ಯಕ್ತಿಯ ಸಹೋದರ 32 ವರ್ಷದ (P-639) ಸೋಂಕಿತನ ವ್ಯಕ್ತಿಯ ಮೂರನೇ ಪ್ರಯೋಗಾಲಯದ ವರದಿ ಬರಬೇಕಾಗಿದೆ. ವರದಿ ನೆಗೆಟಿವ್ ಬಂದ್ ಮೇಲೆ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಈವರೆಗೆ ಜಿಲ್ಲೆಯಲ್ಲಿ 6 ಕೋವಿಡ್19 ಪ್ರಕರಣ ಪತ್ತೆಯಾಗಿದ್ದು, ಒಬ್ಬ ಸೋಂಕಿತ ಗುಣಮುಖನಾಗಿ ಮನೆಗೆ ಮರಳಿದ್ದಾನೆ. ಒಟ್ಟು 5 ಕೋವಿಡ್19 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹಾವನೂರ, ಡಾ.ವಿಶ್ವನಾಥ ಸಾಲಿಮಠ, ಡಾ. ನಿರಂಜನ್, ಡಾ. ಪರಸಪ್ಪ ತುರಚಿಹಾಳ, ಡಾ.ವಿಠ್ಠಲದಾಸ, ಜಿಲ್ಲಾ ನರ್ಸಿಂಗ್ ಸೂಪರಡೆಂಟ್ ರಾಜೇಶ್ವರಿ ಭಟ್ ಸೇರಿದಂತೆ ವಿವಿಧ ವೈದ್ಯರು, ನರ್ಸಿಂಗ್ ಸ್ಟಾಪ್, ಲ್ಯಾಬ್‍ಟೆಕ್ನಿಷಿಯನ್ಸ್ ಇತರ ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು.