ಸೋಯಾಬಿನ್ ಮೊಳಕೆ ಸಮಸ್ಯೆ, ಪರ್ಯಾಯ ಬೆಳೆ ಬೆಳೆಯುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ರೈತರಲ್ಲಿ ಮನವಿ

Share

ಹಾವೇರಿ: ಮುಂಗಾರು ಸೋಯಾ ಬಿತ್ತನೆಯ ಮೊಳಕೆ ಸಮಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ಕಂಪನಿಯ ಮಾಲೀಕರು ಹಾಗೂ ಪೂರೈಕೆದಾರರ ಸಭೆ ಕರೆಯಲಾಗಿದೆ. ಬೀಜದ ಸಮಸ್ಯೆಗಳಿದ್ದರೆ ಕಂಪನಿಗಳನ್ನೆ ಹೊಣೆಗಾರರನ್ನಾಗಿ ಮಾಡಿ ರೈತರಿಗೆ ಬಿತ್ತನೆ ವೆಚ್ಚ ಭರಿಸಲು ಕ್ರಮದ ಜೊತೆಗೆ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಸೋಯಾಬಿನ್ ಮೊಳಕೆ ಸಮಸ್ಯೆ ಕುರಿತಂತೆ ಕೃಷಿ ತಜ್ಞರು ಹಾಗೂ ಕೃಷಿ ಅಧಿಕಾರಿಗಳ ತುರ್ತು ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ವರ್ಷ ಸುರಿದ ಹೆಚ್ಚಿನ ಪ್ರವಾಹದಿಂದಾಗಿ ಈ ವರ್ಷ ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಸಮಸ್ಯೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋಯಾಬಿನ್ ಬಿತ್ತನೆ ಕ್ಷೇತ್ರ ಕಡಿಮೆ ಮಾಡಿ ಪರ್ಯಾಯ ಬೆಳೆಗೆ ರೈತರು ಮುಂದಾಗುವಂತೆ ಮನವಿ ಮಾಡಿಕೊಂಡರು.

ರಾಷ್ಟ್ರೀಯ ಪ್ರವಾಹದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಮೊದಲೇ ಸೋಯಾಬಿನ್ ಬಿತ್ತನೆಯ ತಳಿಯಲ್ಲಿ ಶಕ್ತಿಕಡಿಮೆಯಾದ ಕಾರಣ ಮೊಳಕೆ ಪ್ರಮಾಣವನ್ನು ಶೇ.65ಕ್ಕೆ ಇಳಿಸಿತ್ತು. ಆದರೆ ರಾಜ್ಯದಲ್ಲಿ ಶೇ.50 ರಷ್ಟು ಮೊಳಕೆ ಪ್ರಮಾಣ ಇಳಿಮುಖವಾಗಿದೆ. ರಾಜ್ಯದ ಕೃಷಿ ವಿವಿಗಳು ಶಿಫಾರಸ್ ಮಾಡಿದ ಎಕರೆವಾರು ಸಿಡ್‍ರೇಟ್‍ಗಿಂತ (ಬಿತ್ತನೆ ಪ್ರಮಾಣ) ಹೆಚ್ಚುವರಿ ಪ್ರಮಾಣದಲ್ಲಿ ಬಿತ್ತನೆ ಮಾಡಲು ಬೀಜದ ಬೇಡಿಕೆ ಇದೆ. ಈ ಪ್ರಮಾಣದಲ್ಲಿ ಪೂರೈಕೆ ಸಾಧ್ಯವಿಲ್ಲ. ಸೋಯಾಬೀಜದ ಕೊರೆತ ಇರುವಕಾರಣ ರೈತರು ಪರ್ಯಾಯ ಬೆಳೆ ಬೆಳೆ ಹಾಕುವುದು ಸೂಕ್ತ ಎಂದು ಸಭೆಯಲ್ಲಿ ಕೃಷಿ ತಜ್ಞರು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಮಧ್ಯಪ್ರದೇಶ ಮತ್ತು ಆಂಧ್ರದಿಂದ 1,30,214.01 ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಈ ಪೈಕಿ 1,02,745.05 ಕ್ವಿಂಟಲ್ ಬೀಜವನ್ನು ವಿತರಣೆ ಮಾಡಲಾಗಿದೆ. ಮೊಳಕೆ ಸಮಸ್ಯೆ ಕಾರಣ 2,498 ರೈತರು ಮರಳಿ ಬೀಜವನ್ನು ನೀಡಿದ್ದಾರೆ. ರಾಜ್ಯದ ಸೋಯಾಬಿನ್ ಬಿತ್ತನೆ ಮಾಡಿದ ನಾಲ್ಕು ಜಿಲ್ಲೆಗಳ 9695 ರೈತರು ಬಿತ್ತನೆಮಾಡಿದ 8592.54 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದು ತಿಳಿಸಿದರು.

30ಕ್ಕೂ ಹೆಚ್ಚು ಕಂಪನಿಗಳು ಸೋಯಾಬಿನ್ ಪೂರೈಕೆಮಾಡಿದ್ದು, ಈ ಪೈಕಿ ಕೆಲ ಲಾಟ್‍ಗಳಲ್ಲಿ ಮೊಳಕೆ ಸಮಸ್ಯೆ ಎದುರಾಗಿದೆ. ಈ ಕುರಿತಂತೆ ಮಂಗಳವಾರ ಬೆಂಗಳೂರಿನ ಕೃಷಿ ನಿರ್ದೇಶನಾಲಯದಲ್ಲಿ ಸಭೆ ಕರೆಯಲಾಗಿದೆ. ಪೂರೈಕೆದಾರರು, ಕಂಪನಿಗಳ ಮಾಲೀಕರ ಸಭೆ ಕರೆಯಲಾಗಿದೆ. ಈ ಕುರಿತಂತೆ ಚರ್ಚಿಸಿ ಕಳಪೆಗೆ ಕಾರಣರಾದವರ ಮೇಲೆ ಕ್ರಮವಹಿಸಲಾಗುವುದು. ಬೀಜವನ್ನು ಪ್ರಮಾಣಿಕರಿಸಿದ ಹಾಗೂ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡಿ ನಷ್ಟ ತುಂಬಿಸಿಕೊಡಲಾಗುವುದು ಎಂದು ತಿಳಿಸಿದರು.
ರಾಣೇಬೆನ್ನೂರು ಕ್ಷೇತ್ರ ಶಾಸಕ ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಮಹದೇವ ಛಟ್ಟಿ, ಕೃಷಿ ಇಲಾಖೆ ಅಪರ ನಿರ್ದೇಶಕ ವೆಂಕರಾಮರೆಡ್ಡಿ ಪಾಟೀಲ ಇದ್ದರು.