ಶುದ್ಧ ನೀರಿನ ಘಟಕಗಳ ಸ್ಥಗಿತ, ನೀರಿನ ಸಮಸ್ಯೆಗಳ ದೂರು ಸ್ವೀಕಾರಕ್ಕೆ ಸಹಾಯವಾಣಿ: ಜಿ.ಪಂ.ಅಧ್ಯಕ್ಷ ಬಸವನಗೌಡ ದೇಸಾಯಿ

Share

ಹಾವೇರಿ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಶುದ್ಧ ನೀರಿನ ಘಟಕಗಳ ದುರಸ್ತಿ ಕುರಿತಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸಿ ತಕ್ಷಣವೇ ಸ್ಪಂದಿಸಬೇಕು. ಈ ಕುರಿತಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಸಹಾಯವಾಣಿಗಳನ್ನು ತೆರೆಯುವಂತೆ ಜಿ.ಪಂ.ಇಂಜನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ದೇಸಾಯಿ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಶುದ್ಧ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಕುರಿತಂತೆ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ವಿವಿಧ ಏಜೆನ್ಸಿಗಳ ಸ್ಥಾಪಿಸಲಾದ ಶುದ್ಧ ನೀರಿನ ಘಟಕಗಳ ವ್ಯವಸ್ಥಿತ ನಿರ್ವಹಣೆಗೆ ಒತ್ತಾಯಿಸಿದರು.

ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಜಿಲ್ಲಾ ಪಂಚಾಯತ್, ಕೆ.ಆರ್.ಡಿ.ಎಲ್. ಸಹಕಾರಿ ಇಲಾಖೆ ಹಾಗೂ ಇತರ ಏಜೆನ್ಸಿಗಳ ಮೂಲಕ ಜಿಲ್ಲೆಯಲ್ಲಿ 772 ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳ ತಂಡ ನಿಯೋಜಿಸಿ ಪ್ರತಿ ಘಟಕಗಳ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ಕಲೆಹಾಕಲಾಗಿದೆ. ಫೋಟೋ ಸಹ ಸಂಗ್ರಹಿಸಲಾಗಿದೆ. ಈ ಎಲ್ಲ ಶುದ್ಧ ನೀರಿನ ಘಟಕಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಸಿದ್ಧತೆ ನಡೆಸಲಾಗಿದೆ. 420 ಈ ಘಟಕಗಳ ನಿರ್ವಹಣೆ ಕುರಿತಂತೆ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಂಸ್ಥೆಗೆ ವಹಿಸಲು ಈಗಾಗಲೇ ನಾಲ್ಕು ಏಜೆನ್ಸಿಗಳನ್ನು ಗುರುತಿಸಲಾಗಿದೆ. ಒಂದು ತಿಂಗಳ ಒಳಗಾಗಿ ಏಜೆನ್ಸಿಗೆ ಗಡುವುದು ನೀಡಲಾಗಿದೆ. ಈ ಕುರಿತಂತೆ ವಾರಕ್ಕೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲಾಗುವುದು ಎಂದು ಸಭೆಗೆ ವಿವರಿಸಿದರು.

2015-16ನೇ ಸಾಲಿನಲ್ಲಿ ಕುಡಿಯುವ ನೀರಿಗಾಗಿ ಕೊರೆಸಲಾದ ಕೊಳವೆಬಾವಿಗಳ ಏಜೆನ್ಸಿಗಳಿಗೆ ಹಣಪಾವತಿ ಮಾಡಿಲ್ಲ ಹಾಗೂ 13ನೇ ಹಾಗೂ 14ನೇ ಹಣಕಾಸಿನ ಯೋಜನೆಯಡಿ ಮಂಜೂರಾಗಿ ಕಾಮಗಾರಿ ನಿರ್ವಹಿಸಿದವರಿಗೆ ಅನುದಾನ ಪಾವತಿಸಿರುವುದಿಲ್ಲ. ಈ ಕುರಿತಂತೆ ತ್ವರಿತ ಕ್ರಮವಹಿಸಲು ವಿವಿಧ ಜಿ.ಪಂ.ಸದಸ್ಯರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಾಕಿ ಹಣ ಪಾವತಿಸಲು ಬೇಕಾದ ಅನುದಾನ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾದರೆ ಬಾಕಿ ಹಣ ಪಾವತಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜನೀಯರ್ ಸದಸ್ಯರಿಗೆ ಮಾಹಿತಿ ನೀಡಿದರು.

ಕುಡಿಯುವ ನೀರಿಗಾಗಿ ಮಂಜೂರಾದ 43 ಕೋಟಿ ರೂ. ಅನುದಾನದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾವನೆಯನ್ನು ಪರಿಗಣಿಸಲು ಮನವಿಮಾಡಿಕೊಳ್ಳಲಾಗಿತ್ತು. ಈ ಕ್ರಿಯಾಯೋಜನೆಯಲ್ಲಿ ನಮ್ಮ ಮನವಿಯನ್ನು ಪರಿಗಣಿಸಲು ಸಾಧ್ಯವಾಗಿಲ್ಲ. ಜಿಲ್ಲಾ ಪಂಚಾಯತ್ ಸದಸ್ಯರ ಕುಡಿಯುವ ನೀರಿನ ಪ್ರಸ್ತಾವನೆಗೆ ಹೆಚ್ಚುವರಿ ಅನುದಾನ ಒದಗಿಸುವುದಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸರ್ಕಾರದ ಆಯುಕ್ತರು ಭರವಸೆ ನೀಡಿದಂತೆ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆಗೆ ಸದಸ್ಯರು ಒತ್ತಾಯಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರ ಬೇಡಿಕೆಯಂತೆ ಈಗಾಗಲೇ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಇಂಜನೀಯರ್ ಹಂಚಿನಮನಿ ಅವರು ಉತ್ತರಿಸಿದರು.

ನೆರೆಯಿಂದ ಹಾನಿಯಾದ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿಳಂಬ ನೀತಿ ಅನುಸರಿಸುವ ಕಾರಣ ಸಕಾಲದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ತ್ವರಿತವಾಗಿ ಶಾಲಾ ಕಟ್ಟಡಗಳ ದುರಸ್ತಿ ಕೈಗೊಳ್ಳಲು ಸದಸ್ಯರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 669 ಶಾಲಾ ಕಟ್ಟಡಗಳ ದುರಸ್ತಿಗೆ ಅನುಮೋದನೆ ದೊರೆತಿದೆ. ಈ ಪೈಕಿ ಜಿಲ್ಲಾ ಪಂಚಾಯತ್ ಇಂಜನೀಯರಿಂಗ್ ವಿಭಾಗದಿಂದ 310 ಶಾಲೆಗಳ ದುರಸ್ತಿ ಕಾರ್ಯದ ಗುತ್ತಿಗೆಯನ್ನು ವಹಿಸಲಾಗಿದೆ. ಈವರೆಗೆ 112 ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಜಿ.ಪಂ.ಇಂಜನೀಯರ್ ಹಂಚಿನಮನಿ ವಿವರಿಸಿದರು.

ರಾಣೇಬೆನ್ನೂರ ಭಾಗದಲ್ಲಿ ಅತಿವೃಷ್ಟಿಗಾಗಿ ನೆರೆಯಿಂದ ಹಾನಿಯಾದ ರಸ್ತೆಗಳ ಗುಂಡಿ ಮುಚ್ಚಲು ಕೈಗೊಂಡಿರುವ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಡಾಂಬರೀಕರಣ ಬದಲು ಮೊರಂ ಹಾಕಿ ಗುಂಡಿ ಮುಚ್ಚುತ್ತಿರುವುದರಿಂದ ಮೂರನ್ಕಾಲು ದಿನದಲ್ಲಿ ಮತ್ತೆ ಗುಂಡಿ ಬಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗುಣಮಟ್ಟದ ಕಾಮಗಾರಿಕೈಗೊಳ್ಳುವಂತೆ ಆ ಭಾಗದ ಸದಸ್ಯರು ಜಿಲ್ಲಾ ಪಂಚಾಯತ್ ಸದಸ್ಯರು ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯತ್ ಇಂಜನೀಯರ್ ವಿಭಾಗದ ಅನುದಾನದಲ್ಲಿ 34 ವಿಕಲಚೇತನರಿಗೆ ದ್ವಿಚಕ್ರವಾಹನ ಕೊಡಲು ಟೆಂಡರ್ ಕರೆದರೂ ಸಕಾಲದಲ್ಲಿ ವಿಕಲಚೇತನರ ಇಲಾಖಾ ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ನೀಡಿದ ಕಾರಣ ಕಾರ್ಯಕ್ರಮ ಅನುಷ್ಠಾನುಗೊಳಿಸಲು ಸಾಧ್ಯವಾಗಿಲ್ಲ ಎಂದು ಜಿ.ಪಂ.ಸದಸ್ಯರು ವಿಕಲಚೇತನರ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಇಂಜನೀಯರಿಗ್ ವಿಭಾಗದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಣೇಬೆನ್ನೂರು ಶಾಸಕ ಅರುಣಕುಮಾರ ಗುತ್ತೂರ(ಪೂಜಾರ), ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಮೇಶ ದುಗ್ಗತ್ತಿ, ಮಾರುತಿ ರಾಠೋಡ ಹಾಗೂ ನೀಲವ್ವ ಚವ್ಹಾಣ ಇದ್ದರು.