ರಾಣೇಬೆನ್ನೂರು, ಹಿರೇಕೆರೂರು ವ್ಯಕ್ತಿಗಳ ಕೋವಿಡ್ ವರದಿ ನೆಗಟಿವ್: ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ

Share

ಹಾವೇರಿ: ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಆದಾಗ್ಯೂ ಕೆಲವರು ಸುಳ್ಳು ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದು ಕಂಡುಬಂದಿದೆ. ಇದನ್ನು ಪತ್ತೆಹಚ್ಚಿ ಕಾನೂನು ರೀತ್ಯ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ನಿರ್ದೇಶನ ನೀಡಿದ್ದಾರೆ.

ರಾಣೇಬೆನ್ನೂರಿನ ಮಾರುತಿ ನಗರದ ಒಬ್ಬರು ಮತ್ತು ಹಿರೇಕೆರೂರು ತಾಲ್ಲೂಕಿನ ನವನಗರದ ಒಬ್ಬ ರೋಗಿಯ ರಕ್ತ ಮತ್ತು ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಟ್ಟದ್ದು, ಈ ಇಬ್ಬರು ರೋಗಿಗಳಲ್ಲಿ ಕೊರೊನಾ ಸೋಂಕು ನೆಗಟೆವ್ ಬಂದಿದೆ. ಸಾರ್ವಜನಿಕರು ಈ ಬಗ್ಗೆ ಯಾವುದೇ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ರೋಗ ಹರಡುವುದನ್ನು ತಡೆಗಟ್ಟುವ ಕುರಿತು ಮುಂಜಾಗೃತ ಕ್ರಮ ಕೈಕೊಳ್ಳುವುದು ಅವಶ್ಯವಾಗಿರುತ್ತದೆ. ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮಾತ್ರ ಮಾಧ್ಯಮಗಳ ಮೂಲಕ ಮಾಹಿತಿ ನೀಡಲು ಅಧಿಕೃತ ಅಧಿಕಾರಿಗಳಾಗಿರುತ್ತಾರೆ. ಕೋವಿಡ್-19 (ಕರೋನಾ ಸೋಂಕು) ಹರಡುವಿಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಪ್ರತಿದಿನ ಮಾಧ್ಯಮಗಳ ಮೂಲಕ ಸುದ್ದಿ ಬಿಡುಗಡೆಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಯಾವುದೇ ಆಧಾರವಿಲ್ಲದೆ ನೀಡುತ್ತಿರುವ ಸುಳ್ಳು ಸುದ್ದಿಗಳನ್ನು ಸಾರ್ಜಜನಿಕರು ನಂಬಬಾರದೆಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮನವಿ ಮಾಡಿಕೊಂಡಿದ್ದಾರೆ.

ತನಿಖೆಗೆ ಸೂಚನೆ: ಸಾರ್ವಜನಿಕರು ಇತರ ಅನಾರೋಗ್ಯದ ಕಾರಣಗಳಿಗಾಗಿ ಆ್ಯಂಬುಲೆನ್ಸ್ ಮೂಲಕ ಸೂಕ್ತ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರುವ ಪ್ರಕ್ರಿಯೆ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ “ರಾಣೇಬೆನ್ನೂರ ಪಟ್ಟಣದ ಮಾರುತಿ ನಗರದ ಮಹಿಳೆಗೆ ಕರೊನಾ ದೃಡ ಎಂದು ರಾಣೇಬೆನ್ನೂರಿನಲ್ಲಿ ಹೈ-ಅಲರ್ಟ ಘೋಷಣೆ. ಮಾರುತಿ ನಗರದ ಸುತ್ತಲೂ ಸಂಪೂರ್ಣ ಸೀಲ್ ಡೌನ್ ಮಹಿಳೆಯ ಪತಿ ಹಾಗೂ ಮೂವರು ಹೊಂ ಕ್ವಾರಂಟೈನ್ ಗೆ ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ” ಅಂತಾ ಸುಳ್ಳು ಸುದ್ದಿಯನ್ನು ವಾಟ್ಸ್ ಆಫ್ ಗ್ರೂಪ್ ಗಳಿಗೆ ರವಾನಿಸಿರುವುದು ಕಂಡು ಬಂದಿರುತ್ತದೆ.

ಈ ಹಿನ್ನಲೆಯಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಇನ್ನುಮುಂದೆ ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 34 ರಂತೆ ಕಾನೂನು ರೀತಿಯ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಆದೇಶಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ದ ತಕ್ಷಣ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.