ರಾಜ್ಯದ ಅಭಿವೃದ್ಧಿಗೆ ಸಂಪನ್ಮೂಲಗಳ ಕೊರತೆಯಾಗದಂತೆ ಎಚ್ಚರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Share

ಹಾವೇರಿ: ರಾಜ್ಯದ ಅಭಿವೃದ್ಧಿಗೆ ಸಂಪನ್ಮೂಲಗಳ ಕೊರತೆ ಆಗದಂತೆ ಎಚ್ಚರವಹಿಸಿ ಬಜೆಟ್‍ನಲ್ಲಿ ಎಲ್ಲ ಕ್ಷೇತ್ರಗಳ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಸೋಮವಾರ ಹಾನಗಲ್ ತಾಲೂಕಿನ ಬಾಳಂಬೀಡ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಮತ್ತು ಹಿರೇಕಾಂಶಿ ಇತರೆ 239 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಅತಿವೃಷ್ಟಿ ಮತ್ತು ನೆರೆಯಿಂದ ರಾಜ್ಯದಲ್ಲಿ ಅಪಾರ ಹಾನಿಯುಂಟಾಗಿದೆ. ಮನೆಗಳ ಹಾನಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲವನ್ನು ಕ್ರೋಢಿಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜನತೆ ಅವಕಾಶಮಾಡಿಕೊಡಬೇಕು. ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕೃಷಿ ಜೊತೆಗೆ ಕೈಗಾರಿಕೆ ಕ್ಷೇತ್ರವು ಬೆಳವಣೆಯಾಗಬೇಕು. ರಾಜ್ಯಕ್ಕೆ ಹೊಸ ಹೊಸ ಉದ್ಯಮಿಗಳನ್ನು ಆಹ್ವಾನಿಸಬೇಕು. ಕೈಗಾರಿಕೆಗಳು ಸ್ಥಾಪನೆಯಾಗಬೇಕು. ರಾಜ್ಯದ ಎಲ್ಲ ಭಾಗಗಳು ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಈ ಭಾಗದ 20-30 ವರ್ಷಗಳ ಬೇಡಿಕೆಯಾದ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ತುಂಗಭದ್ರಾ ಹಾಗೂ ವರದಾ ನದಿಗಳಿಂದ ಕೆರೆಗಳಿಗೆ ನೀರು ತುಂಬಿಸಲು ಹಾವೇರಿ ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾನಗಲ್ ಕ್ಷೇತ್ರಗಳಿಗೆ ಅಂದಾಜು 1500 ಕೋಟಿಗಳ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇನೆ. ಈಗಾಗಲೇ ಕೆಲಸಗಳು ಆರಂಭಗೊಂಡಿವೆ. ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿದ್ದೇನೆ, ಕೆಲಸ ಆರಂಭಗೊಂಡಿದೆ. ಬಾಳಂಬೀಡ ಹಾಗೂ ಹಿರೇಕಾಂಶಿ ಕೆರೆಗಳು ಸೇರಿದಂತೆ ಈ ಭಾಗದ 239 ಕೆರೆಗಳಿಗೆ ನೀರು ತುಂಬಿಸಲು ಅಂದಾಜು 504 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ. ಮುಂದಿನ ಒಂದುವರೆ ಎರಡು ವರ್ಷಗಳಲ್ಲಿ ಈ ಯೋಜನೆಗಳು ಪೂರ್ಣಗೊಳ್ಳಲಿವೆ. ಕೆರೆ ತುಂಬುವುದರಿಂದ ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಳದಿಂದ ನೀರಾವರಿ ಸೌಕರ್ಯಗಳು ಲಭ್ಯವಾಗಲಿವೆ ಎಂದು ಹೇಳಿದರು.

ಈ ವರ್ಷ ಮಂಡಿಸಲಿರುವ ಬಜೆಟ್‍ನಲ್ಲಿ ಹಾವೇರಿ ಜಿಲ್ಲೆಯ ಜನರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾದಷ್ಟು ಪ್ರಯತ್ನಿಸಲಾಗುವುದು. ಈ ಭಾಗದ ಜನರ ಬೇಡಿಕೆಯಂತೆ ಮೆಗಾ ಡೈರಿ ಮಂಜೂರಾತಿಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಾತನಾಡಿ, ರಾಜ್ಯದ ರೈತರ ಉಳಿವಿಗಾಗಿ ರಾಜೀನಾಮೆ ಕೊಟ್ಟು ರೈತಪರ ಚಿಂತನೆಯ ಯಡಿಯೂರಪ್ಪನವರ ಸರ್ಕಾರ ರಚನೆಗೆ ನೆರವಾಗಿದ್ದು ನನಗೆ ಸಾರ್ಥಕಭಾವನೆ ಮೂಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಮುಂದಿನ ಮೂರುಕಾಲು ವರ್ಷ ಸುಭದ್ರವಾಗಿರುತ್ತದೆ. ಮುಖ್ಯಮಂತ್ರಿಗಳ ಚಿಂತನೆ, ರೈತಪರ ಚಿಂತನೆ, ರೈತರು ಹಸುವಿನಿಂದ ಸಾಯಬಾರದು ಎಂಬ ಕಳಕಳಿ ಅವರಿಗಿದೆ. ರೈತರು ಎದೆಯುಬ್ಬಿಸಿ ನಡೆಯಬೇಕು ಎಂಬುದು ಅವರ ಆಶಯವಾಗಿದೆ ಎಂದು ಹೇಳಿದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಹಾನಗಲ್ ತಾಲೂಕಿನ ಬಾಳಂಬೀಡ ಮತ್ತು ಹಿರೇಕಾಂಶಿ ಭಾಗದ ಜನತೆಗೆ ಇಂದು ಚಿರಸ್ಮರಣೀಯ ದಿನ. ಈ ಭಾಗದ ಜನತೆಯ ಬಹುದಿನಗಳ ನೀರಾವರಿಯ ಕನಸನ್ನು ಮುಖ್ಯಮಂತ್ರಿಗಳು ಈಡೇರಸಿದ್ದಾರೆ. ನೀರಾವರಿ ಕನಸು ಎಲ್ಲರಿಗೂ ಸಿಗುವುದು ಮರಿಚಿಕೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿ ಮನೆಮಾಡಿದ ಸಂದರ್ಭದಲ್ಲಿ ಮಾನ್ಯಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಭಾವನೆಯನ್ನು ದೂರಮಾಡಿ 2008 ರಲ್ಲಿ ರಾಜ್ಯದ ನೀರಾವರಿ ದಿಕ್ಕನ್ನೆ ಬದಲಾಯಿಸಿ ಉತ್ತರ ಕರ್ನಾಟಕ ಭಾಗದ ಏಳು ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಿದ್ದು ಇತಿಹಾಸವಾಗಿದೆ. ಇದಕ್ಕಾಗಿ ಖರ್ಚು ಮಾಡಿದ್ದು ಕೇವಲ 18 ಸಾವಿರ ಕೋಟಿ ರೂ. 2012ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಒಂದು ಸಾವಿರ ಕೋಟಿ ಖರ್ಚುಮಾಡಿ ಒಂದು ಲಕ್ಷ ಎಕರೆ ನೀರಾವರಿಯನ್ನು ಹಾವೇರಿಗೆ ಮಾಡಿಕೊಟ್ಟಿದೆ. ಆದರೆ ನಮ್ಮ ನಂತರ ಸರ್ಕಾರ ಕೇವಲ ಮಾತಿನ ಭರವಸೆಗೆ ಸೀಮಿತವಾಯಿತು. ಇವರ ಐದು ವರ್ಷದ ಅವಧಿಯಲ್ಲಿ ಮಾಡಿದ್ದು ಕೇವಲ ನಾಲ್ಕು ಲಕ್ಷ ಎಕರೆ. ಇದಕ್ಕಾಗಿ ವೆಚ್ಚಮಾಡಿದ್ದು 58 ಸಾವಿರ ಕೋಟಿ ರೂ.ಗಳು ಎಂದು ಹೇಳಿದರು.

ಯಡಿಯೂರಪ್ಪನವರು ಆಡಳಿತದಲ್ಲಿದ್ದಾಗ ಮೈಮುರಿದು ಕೆಲಸಮಾಡುವ ಜಾಯಮಾನ, ವಿರೋಧಪಕ್ಷದಲ್ಲಿದ್ದಾಗ ಹೋರಾಟಮಾಡುವ ಮನೋಭಾವದವರು. ಹಿಡಿದ ಕೆಲಸವನ್ನು ಅತ್ಯಂತ ಗಟ್ಟಿಯಾಗಿ ಮಾಡುವ ಯಡಿಯೂರಪ್ಪನವರಿಗೆ ಹಾವೇರಿ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಮುಂಬರುವ ಬಜೆಟ್‍ನಲ್ಲಿ ರಾಜ್ಯದ ಜನತೆ ಮತ್ತು ಜಿಲ್ಲೆಯ ಜನತೆಗೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂಬ ಭರವಸೆ ನನ್ನದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ ಅವರು ಅಧಿಕಾರ ವಹಿಸಿಕೊಂಡ ಕೇವಲ 78 ದಿನಗಳಲ್ಲಿ ಜಿಲ್ಲೆಗೆ ಬೃಹತ್ ಎರಡು ಯೋಜನೆಗಳನ್ನು ಮಂಜೂರು ಮಾಡಿದ್ದಾರೆ. ನೂರು ದಿನಗಳಲ್ಲಿ ನನ್ನ ಸಂಸತ್ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ 2000 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಿದ್ದಾರೆ. ಶಿವಮೊಗ್ಗ, ರಾಣೇಬೆನ್ನೂರು, ಗದಗ ರೈಲ್ವೆ ಮಾರ್ಗಕ್ಕೆ ಅನುದಾನ ಒದಗಿಸಿದ್ದಾರೆ. ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಮುಂದಿನ ಬಜೆಟ್‍ನಲ್ಲಿ ಹಿಂದುಳಿದ ಜಿಲ್ಲೆ ಹಾವೇರಿ ಹಾಗೂ ಗದಗ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಾನಗಲ್ ಕ್ಷೇತ್ರದ ಶಾಸಕರಾದ ಸಿ.ಎಂ.ಉದಾಸಿ ಅವರು ಮಾತನಾಡಿ, ಈ ಭಾಗದ ಜನರ ನೀರಾವರಿ ಬೇಡಿಕೆಗಳನ್ನು ಈಡೇರಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್.ಬಿ.ಸಂಕನೂರ, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ದರಾಜ ಕಲಕೋಟಿ, ಹಾನಗಲ್ ತಾಲೂಕು ಪಂಚಾಯತಿ ಅಧ್ಯಕ್ಷ ಸಿದ್ದಪ್ಪ ಕರೆಯಪ್ಪ ಎರಗಪ್ಪನವರ, ಬಾಳಂಬೀಡ ಗ್ರಾ.ಪಂ.ಅಧ್ಯಕ್ಷ ಪ್ರಕಾಶ ದುಂಡೆಣ್ಣನವರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಮಾಜಿ ಶಾಸಕ ಶಿವರಾಜ ಸಜ್ಜನರ ಇತರರು ಉಪಸ್ಥಿತರಿದ್ದರು.