ನೆರೆ ಗ್ರಾಮಗಳ ಶಾಶ್ವತ ಸ್ಥಳಾಂತರ, ತಡೆಗೋಡೆ ನಿರ್ಮಾಣ ಮಾಹಿತಿ ಸಂಗ್ರಹಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

Share

ಹಾವೇರಿ: ನೆರೆ ಪರಿಹಾರಕ್ಕೆ ಸಂಬಂಧಿಸಿದ ಯಾವುದೇ ಪರಿಹಾರ ಕಾರ್ಯಗಳು ನಿಲ್ಲುವುದು, ವಿಳಂಬವಾಗುವುದು ಆಗಬಾರದು. ಸರ್ಕಾರ ಸಂತ್ರಸ್ತರ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ವೇಗದಲ್ಲಿ ಜಿಲ್ಲಾಡಳಿತ ಕೆಲಸ ಮಾಡವುದರೊಂದಿಗೆ ಸಂತ್ರಸ್ತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಅತಿವೃಷ್ಠಿ ಹಾಗೂ ನೆರೆ ಪರಿಹಾರ ಕಾರ್ಯಗಳ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ನೆರೆ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಅತ್ಯುತ್ತಮವಾಗಿ ನಿರ್ವಹಣೆಮಾಡಿದ್ದಾರೆ. ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುವೆ. ಪರಿಹಾರ ಕಾರ್ಯವೂ ಅಷ್ಟೇ ವೇಗವಾಗಿ ತ್ವರಿತವಾಗಿ ನಡೆಯಬೇಕು. ಪುನರ್ವಸತಿ ಕೆಲಸ ನಿರಂತರವಾಗಿ ನಡೆಯಬೇಕು. ಉನ್ನತ ಮಟ್ಟದಲ್ಲಿ ನಡೆಯಬೇಕು. ಎಲ್ಲ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಪದೆ ಪದೇ ನೆರೆ ಹಾವಳಿ ಸಮಸ್ಯೆಯನ್ನು ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳ ಶಾಶ್ವತ ಸ್ಥಳಾಂತರ ಅಗತ್ಯವಾಗಿದೆ. ಯಾವ ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ಹಾಗೂ ಯಾವ ಗ್ರಾಮಗಳನ್ನು ಭಾಗಶಃ ಸ್ಥಳಾಂತರಿಸಬೇಕು, ಯಾವ ಗ್ರಾಮಗಳಿಗೆ ತಡೆ ಗೋಡೆ ನಿರ್ಮಿಸಬೇಕು ಎಂಬ ಮಾಹಿತಿ ಹಾಗೂ  ಅಗತ್ಯವಾದ ಅನುದಾನ ಕುರಿತಂತೆ ವಿವರ ಸಲ್ಲಿಕೆಗೆ  ಸೂಚಿಸಿದರು.

ಫಲಾನುಭವಿಗಳಿಗೆ ತುರ್ತು ಪರಿಹಾರವಾಗಿ ಹತ್ತು ಸಾವಿರ ರೂ. ನೀಡಲು 11.30 ಕೋಟಿ ರೂ. ಬೇಕಾಗಿದೆ ಎಂದು ಮಾಹಿತಿ ಸಲ್ಲಿಸಲಾಗಿದೆ. ಮರು ಸಮೀಕ್ಷೆಯ ಮೂಲಕ ಇನ್ನೂ ಕೆಲವು ಮನೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಜಿಲ್ಲಾಡಳಿತದಿಂದ 18 ಕೋಟಿ ರೂ.ಗಳ ಬೇಡಿಕೆ ಸಲ್ಲಿಸಲಾಗಿತ್ತು. ಸರ್ಕಾರದಿಂದ ತುರ್ತಾಗಿ 20 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ನಾಳೆ ಮಧ್ಯಾಹ್ನದೊಳಗೆ ಬಾಕಿ ಉಳಿದಿರುವ ಫಲಾನುಭವಿಗಳ ಪರಿಹಾರ ಹಣ ಖಾತೆಗೆ ಜಮೆಯಾಗಬೇಕು ಎಂದು ಸೂಚಿಸಿದರು.

ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಸರ್ಕಾರದ ಬಸವ, ಅಂಬೇಡ್ಕರ ವಿವಿಧ ವಸತಿ ಯೋಜನೆಗಳನ್ನು ಮಂಜೂರ ಮಾಡಿ ಕುಸಿದ ಮನೆಗಳ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಈ ಕುರಿತಂತೆ ಸರ್ಕಾರದ ಹಂತದಲ್ಲಿ ನಿರ್ಧಾರ ಮಾಡಲಾಗಿದೆ. ಶೀಘ್ರವೇ ಮಾರ್ಗಸೂಚಿ ಜಿಲ್ಲಾಡಳಿತಕ್ಕೆ ಬರಲಿದೆ ಎಂದು ಹೇಳಿದರು.

ಈಗಾಗಲೇ ಮೊದಲ ಸರ್ವೇಯಲ್ಲಿ ಕೈಬಿಟ್ಟುಹೋಗಿರುವ ಮನೆಹಾನಿ ಇತರ ಸಮೀಕ್ಷೆಯನ್ನು ಪುನರ್ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿದ್ದೀರಿ. ಸಂಗ್ರಹಿಸಿದ ಮಾಹಿತಿಯನ್ನು ಅಷ್ಟೇ ಅಚ್ಚುಕಟ್ಟಾಗಿ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕಾಗಿದೆ. ಮನೆಹಾನಿ ವಿವರವನ್ನು ರಾಜೀವಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಿದಾಗ ಮಾತ್ರ ಅನುದಾನ ಬಿಡುಗಡೆಯಾಗುತ್ತದೆ. ಮಾರ್ಗಸೂಚಿಯಂತೆ ಅಗತ್ಯ ದಾಖಲೆಗಳೊಂದಿಗೆ ತಂತ್ರಾಂಶದಲ್ಲಿ ಮಾಹಿತಿ ನೀಡಬೇಕು. ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಆವಾಬ್ದಾರಿಯಿಂದ ಕಾರ್ಯನಿರ್ವಹಿಸದಿದ್ದರೆ ನಿರಾಶ್ರಿತರಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ತಪ್ಪಾಗದಂತೆ ಮೂರು ಹಂತದ ಅಧಿಕಾರಿಗಳು ಈ ಮಾಹಿತಿಯನ್ನು ಅಪ್‍ಲೋಡ್‍ಮಾಡಿ ಪರಿಶೀಲನೆ ನಡೆಸಬೇಕು. ಕೇವಲ ತಾಂತ್ರಿಕ ಸಿಬ್ಬಂದಿಯ ಮೇಲೆ ಬಿಡಬಾರದು ಎಂದು ಎಚ್ಚರಿಸಿದರು.

ನೆರೆಯಿಂದ ಹಾನಿಯಾಗಿರುವ ಮನೆಗಳಲ್ಲಿ ಬಾಡಿಗೆದಾರರು ವಾಸವಾಗಿದ್ದರೆ ಮಾಲೀಕರಿಗೂ ಮತ್ತು ಬಾಡಿಗೆದಾರರಿಗೂ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಮಾರ್ಗಸೂಚಿಯು ಸರ್ಕಾರದಿಂದ ಬರಲಿದೆ. ಈ ಕುರಿತಂತೆ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ನೆರೆ ಹಾವಳಿ ಹಾನಿ ಮಾಹಿತಿಯನ್ನು ಸ್ಥಳೀಯ ಶಾಸಕರೊಂದಿಗೆ ಸಭೆನಡೆಸಿ ಚರ್ಚಿಸಬೇಕು. ಒಂದೊಮ್ಮೆ ಯಾವುದಾದರೂ ಗ್ರಾಮಗಳು  ಅಥವಾ ಮನೆಗಳು, ಬೆಳೆಗಳು ಕೈಬಿಟ್ಟು ಹೋಗಿವೆ ಎಂದು ಶಾಸಕರು ಸೂಚಿಸಿದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸುವಂತೆ ತಹಶೀಲ್ದಾರಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳು ಜಿಲ್ಲೆಯ ನೆರೆಪೀಡಿತ ಗ್ರಾಮಗಳಿಗೆ ಶನಿವಾರ ಭೇಟಿ ನೀಡಲಿದ್ದು, ಕೂಡಲ, ಕುಣಿಮೆಳ್ಳಿಹಳ್ಳಿ, ಕರ್ಜಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ನೆರೆ ಅತಿವೃಷ್ಠಿಯಿಂದ ಹಾನಿಯಾಗಿರುವ ಮನೆಹಾನಿ, ಬೆಳೆಹಾನಿ, ಭೂಮಿಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯ ಕುರಿತಂತೆ ನಿಖರವಾದ ಸಂಖ್ಯೆ, ಹಾನಿಯ ವಿವರ, ಪರಿಹಾರಕ್ಕೆ ಬೇಕಾದ ಮೊತ್ತ ಕುರಿತಂತೆ ಸ್ಪಷ್ಟವಾಗಿ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ವಿವರ, ಸರ್ವೇ ಕಾರ್ಯ ಹಾಗೂ ಪರಿಹಾರ ವಿವರಗಳನ್ನು ಸಭೆಗೆ ವಿವರಿಸಿದರು.

ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ವಿ.ಎಸ್. ಸಂಕನೂರ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ ಬೋಯಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.