ಏಕಾಗ್ರತೆ ಬದುಕಿನ ಗುರಿ ಸಾಧನೆಗೆ ದಾರಿ: ಬಸಶಾಂತಲಿಂಗ ಶ್ರೀ

Share

ಹಾವೇರಿ: ಯಾವುದೇ ಕ್ಷೇತ್ರದಲ್ಲಿ ಮನುಷ್ಯನಿಗೆ ಇಚ್ಚಾಶಕ್ತಿ, ಏಕಾಗ್ರತೆ ಇದ್ದರೆ, ನಮ್ಮಲ್ಲಿರುವ ಗುರಿ ತಲುಪಿ ಎಲ್ಲವನ್ನು ಸಾಧಿಸಬಹುದೆಂದು ಬಸವ ಕೇಂದ್ರ ಹೊಸಮಠದ ಬಸಶಾಂತಲಿಂಗ ಶ್ರೀ ಹೇಳಿದರು.

ಜಯದೇವ ನಗರದ ಅಕ್ಕನ ಬಳಗ ಹೊಂಡದಮಠದಲ್ಲಿ ಗುರುವಾರ ಜರುಗಿದ ಶ್ರೀಮಠದ ಶ್ರಾವಣ ಮಾಸದ ವಿಶೇಷ ಕಲ್ಯಾಣ ದರ್ಶಣ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಕ್ರಿಯೆಯ ಸಫಲತೆ ಪಡೆಯುವಲ್ಲಿ ಏಕಾಗ್ರತೆ ಅತ್ಯವಶ್ಯಕ. ಏಕಾಗ್ರತೆ ಕೂಡಿಸುವುದು ಬೇರೆಯವರಿಂದ ಸಾಧ್ಯವಿಲ್ಲ. ನಾವೇ ನಮ್ಮೊಳಗೆ ಅದನ್ನು ಹುಡುಕಬೇಕು. ಅದಕ್ಕಾಗಿ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು ಎಂದರು.

ಮನಸ್ಸು ಚಂಚಲವಾಗಿದ್ದರೆ ಓದು, ಬರವಣಿಗೆ ಮಾತ್ರವಲ್ಲ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಎಲ್ಲರಿಗೂ ಇದ್ದೇ ಇರುತ್ತದೆ. ಯಾವುದೇ ಕಾರ್ಯದಲ್ಲಿ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದು ಕಷ್ಟ. ಆದರೆ ಇಂದಿನ ಜನಾಂಗಕ್ಕೆ ಅದು ಅಸಾಧ್ಯವಾದುದು ಎನಿಲ್ಲ ಎಂಬುವುದನ್ನು ಅರಿತು ಬದುಕಿನ ಗುರಿ ಸಾಧನೆಯತ್ತ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು.

ಧ್ಯಾನ ಹಾಗೂ ಯೋಗದಿಂದ ಏಕಾಗ್ರತೆಯನ್ನು ಸಾಧಿಸಬಹುದು. ಇಂದು ಯಾವುದೇ ಯೋಗ ಪ್ರಾರಂಭಕ್ಕೂ ಮುನ್ನ ಕೆಲವು ನಿಮಿಷ ಧ್ಯಾನಸ್ಥರಾಗಿರಲು ಸಲಹೆ ನೀಡುತ್ತಾರೆ. ಇದರ ಮುಖ್ಯ ಉದ್ದೇಶವೇ ಏಕಾಗ್ರತೆ ಕಂಡು ಕೊಳ್ಳುವುದಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್.ಆರ್. ಹಿರೇಮಠ ಬದುಕಿಗೆ ಬೇಕು ಏಕಾಗ್ರತೆ ಕುರಿತು ಉಪನ್ಯಾಸ ನೀಡಿದರು. ಅಕ್ಕನ ಬಳಗದ ಸದಸ್ಯರು ಸೇರಿದಂತೆ ಇತರರು ಇದ್ದರು.