ನೆರೆಹಾನಿ ಮನೆಗಳ ಪುನರ್ ನಿರ್ಮಾಣ ಗಂಭೀರವಾಗಿ ಪರಗಣಿಸಿ: ಮನೋಜ್‍ಕುಮಾರ್ ಮೀನಾ

Share

ಹಾವೇರಿ: ನೆರೆಯಿಂದ ಹಾನಿಗೊಳಗಾದ ಎಲ್ಲ ಮನೆಗಳ ಪುನರ್ ನಿರ್ಮಾಣ ಕಾರ್ಯ ಒಂದು ವಾರದೊಳಗಾಗಿ ಆರಂಭವಾಗಲೇಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‍ಕುಮಾರ್ ಮೀನಾ ಅವರು ಸೂಚನೆ ನೀಡದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್ ವಸತಿ, ಪರಿಹಾರ ಕಾರ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜನರು ನೆರೆಯಿಂದ ಮನೆ ಕಳೆದುಕೊಂಡು ಐದಾರು ತಿಂಗಳಾಯಿತು. ಒಂದು ಮನೆಯೂ ಪೂರ್ಣಗೊಂಡಿಲ್ಲ. ಈಗಾಗಲೇ ತಳಪಾಯ ಹಾಕಲು ಮೊದಲ ಕಂತಾಗಿ ಒಂದು ಲಕ್ಷ ರೂ. ಸಹ ಪಾವತಿಸಲಾಗಿದೆ. ತಳಪಾಯಹಾಕಿ ಫೋಟೋ ಅಪ್‍ಲೋಡ್ ಮಾಡಿದರೆ ಎರಡನೇ ಕಂತಿನ ಹಣ ಸಹ ಬಿಡುಗಡೆಮಾಡಲಾಗುವುದು ಎಂದರು‌.

ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಸರ್ಕಾರ ನೆರೆಸಂತ್ರಸ್ತರಿಗೆ ತ್ವರಿತವಾಗಿ ಪುನರ್ ವಸತಿ ಕಲ್ಪಿಸಲು ಗಂಭೀರವಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕಾರ್ಯನಿರ್ವಹಿಸಬೇಕು. ನಿರ್ಲಕ್ಷಿಸಿದರೆ ನೋಟೀಸ್ ಜಾರಿಗೊಳಿಸಿ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ದೇಶದ ಯಾವುದೇ ರಾಜ್ಯಗಳಲ್ಲಿ ಐದು ಲಕ್ಷ ರೂ.ನಷ್ಟು ದೊಡ್ಡ ಮೊತ್ತದ ಪರಿಹಾರ ಘೋಷಣೆಯಾಗಿಲ್ಲ. ದೊಡ್ಡಮೊತ್ತದ ಪರಿಹಾರ ನೀಡಿ ಮೊದಲ ಕಂತಿನ ಹಣವನ್ನು ಪಾವತಿಸಿದರೂ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರೆ ಸರ್ವೇಯ ಕಾರ್ಯದಲ್ಲಿಯೇ ದೋಷವಿದೆಯೇ ಎಂದು ಪ್ರಶ್ನಿಸಿದ ಅವರು, ಪರಿಹಾರ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಿ ಅಗತ್ಯವಿದ್ದವರಿಗೆ ಮನೆನಿರ್ಮಾಣ ಮಾಡಿಕೊಡಿ. ಮನೆಹಾನಿಯಾದ ನಿವೇಶನದ ಬದಲು ಬೇರೆಡೆ ನಿರ್ಮಾಣ ಮಾಡಲು ಬೇಡಿಕೆ ಸಲ್ಲಿಸಿದರೆ ಕಾನೂನುಬದ್ಧವಾದ ನಿವೇಶನವಿದ್ದರೆ ಜಿಲ್ಲಾಧಿಕಾರಿಗಳೇ ಅನುಮತಿ ನೀಡುತ್ತಾರೆ ಎಂದು ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲಿಸಿದ ಕಾರ್ಯದರ್ಶಿಗಳು ಶಾಶ್ವತ ನೀರಿನ ಮೂಲಗಳು ದೊರೆತರೆ ಮಾತ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು.