ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು: ಸಂಸದ ಶಿವಕುಮಾರ ಉದಾಸಿ

Share

ಹಾವೇರಿ: ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಹಾಗೂ ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದರು.

ಹಾನಗಲ್ ನಗರದ ಶ್ರೀ ಕುಮಾರೇಶ್ವರ ಮಠದ ವಿರಕ್ತಮಠದ ಆವರಣದಲ್ಲಿ ರವಿವಾರ ತಾಲೂಕು ಆಡಳಿತ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹಿರೇಬಾಸೂರ ಗ್ರಾಮದ ಫಲಾನುಭವಿಗಳಿಗೆ ಸಾಗುವಳಿ ಪಟ್ಟಾ ವಿತರಣೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ (ಪಿ.ಎಂ.ಎ.ವೈ)ಯಲ್ಲಿ ಮನೆ ನಿರ್ಮಾಣದ ಕಾರ್ಯಾದೇಶ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬಹಳ ಕಡೆಗಳಲ್ಲಿ ಅರಣ್ಯ ಭೂಮಿ ಒತ್ತುವರಿ ಮೂಲಕ ಸಾಗುವಳಿ ಜಮೀನುಗಳಾಗಿಗುತ್ತಿವೆ. 1978ರ ಮೊದಲು ಅರಣ್ಯ ಸಾಗುವಳಿ ಮಾಡುತ್ತಿರುವ ಕುರಿತು ದಾಖಲೆ ಇರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ನಂತರದ ದಿನಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವುದು ಕಾನೂನು ಬಾಹೀರ ಎಂದು ಸುಪ್ರೀಂ ಕೋರ್ಟ ಆದೇಶ ಮಾಡಿದೆ. ಹಾಗಾಗಿ 1978ರ ನಂತರದ ದಿನಗಳಲ್ಲಿ ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಇದನ್ನು ಎಲ್ಲರು ತಿಳಿದುಕೊಳ್ಳಬೇಕು ಹಾಗೂ ಇತತರಿಗೆ ತಿಳಿಸಿ ಎಂದು ಹೇಳಿದರು.

ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ತಾಲೂಕಿನಲ್ಲಿ 17600 ಮನೆಗಳಿಗೆ ಅರ್ಜಿ ಬಂದಿದ್ದು, ರಾಜೀವಗಾಂಧಿ ಹೌಸಿಂಗ್ ಕಾರ್ಪೋರೇಷನ್‍ಗೆ ಕಳುಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ದೊರಕಿಸುವ ನಿಟ್ಟಿನಲ್ಲಿ ಆಧಾರ್ ಲಿಂಕ್ ಮಾಡಲಾಗಿದೆ. ಆಧಾರ್ ಲಿಂಕ್‍ನಿಂದ 1.50 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಿದೆ. ದೇಶದಲ್ಲಿ ಬದಲಾವಣೆ ಹಾಗೂ ಬೆಳವಣಿಗೆ ಬಂದಿದೆ. 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶ ಪ್ರಧಾನ ಮಂತ್ರಿಗಳು ಹೊಂದಿದ್ದಾರೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ದೇಶದ 16 ಕೋಟಿ ರೈತರು ಪ್ರತಿ ವರ್ಷ ಆರು ಸಾವಿರ ರೂ.ಪಡೆದರೆ ರಾಜ್ಯ 53 ಲಕ್ಷ ರೈತರು ಕೇಂದ್ರ ಸರ್ಕಾರದ 6 ಸಾವಿರ ಹಾಗೂ ರಾಜ್ಯ ಸರ್ಕಾರದ 4 ಸಾವಿರ ಒಟ್ಟು 10 ಸಾವಿರ ರೂ. ರೈತರ ಖಾತೆ ಜಮೆಯಾಗಲಿದೆ. ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ 74 ದಿನಗಳಲ್ಲಿ ಹಾನಗಲ್ ತಾಲೂಕಿಗೆ 506 ಕೋಟಿ ರೂ.ಗಳ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಒಟ್ಟಾರೆ ಜಿಲ್ಲೆಯ ಅಭಿವೃಧ್ಧಿಗೆ ಮೂರು ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತ ಮಂಜೂರಾಗಿದೆ. ಪ್ರಧಾನ ಮಂತ್ರಿಗಳು ದೇಶದ ಹಿತದೃಷ್ಟಿಯಿಂದ ಅನೇಕ ನಿರ್ಣಕೈಗೊಂಡಿದ್ದಾರೆ. ಪ್ರಧಾನ ಮಂತ್ರಿಗಳ 15 ಅಂಶದ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಹಾಗೂ ಸಹಭಾಗಿತ್ವ ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ.ಉದಾಸಿ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಜಾರಿಗೆ ಸದಾ ಸಿದ್ದನಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ತಾಲೂಕಿನ ಜನರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. 1978ರ ಮೊದಲು ಅರಣ್ಯ ಸಾಗುವಳಿ ಮಾಡುತ್ತಿದ್ದ ಅವರ ದಾಖಲೆ ಆಧರಿಸಿ ಹಕ್ಕು ಪತ್ರ ನೀಡಲಾಗುತ್ತಿದೆ. ಹಕ್ಕು ಪತ್ರ ನೀಡಲಾದ ಫಲಾನುಭವಿಗಳಿಗೆ ಒಂದು ವಾರದಲ್ಲಿ ಪಹಣಿ ಪತ್ರ ನೀಡುವುದಾಗಿ ತಹಶೀಲ್ದಾರ ಅವರು ತಿಳಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಮಧ್ಯವರ್ತಿಗಳ ಆಮೀಷಗಳಿಗೆ ಬಲಿಯಾಗಿ ಯಾರಿಗೂ ಹಣ ನೀಡಬೇಡಿ. ನಿಮ್ಮ ಸಮಸ್ಯೆಗಳು ಏನಾದರೂ ಇದ್ದಲ್ಲಿ ನೇರವಾಗಿ ನನ್ನನ್ನು ಭೇಟಿಯಾಗಿ ಎಂದು ಹೇಳಿದರು.

ತಾಲೂಕಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾದ ರಸ್ತೆ ಹಾಗೂ ಮೂಲ ಸೌಕರ್ಯ ಕಾಮಗಾರಿಗಳಿಗೆ 5.75 ಕೋಟಿ ರೂ. ಮಂಜೂರಾಗಿದೆ. ಎಸ್.ಎಸ್.ಎಲ್.ಸಿ ಪಾಸ್ ಅಥವಾ ಅನುತ್ತೀರ್ಣರಾದ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡುವ ಕಾಲೇಜನ್ನು ಶೀಘ್ರದಲ್ಲಿ ತಾಲೂಕಿನಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಹಕ್ಕುಪತ್ರ ವಿತರಣೆ: ಹಿರೇಬಾಸೂರ ಗ್ರಾಮದ 69 ಜನರಿಗೆ ಸಾಗುವಳಿ ಪಟ್ಟಾ ಹಾಗೂ ಹಾನಗಲ್ ನಗರದ 88 ಜನರಿಗೆ ವಾಜಪೇಯಿ ನಗರ ವಸತಿ ಯೋಜನೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ (ಪಿ.ಎಂ.ಎ.ವೈ)ಯಲ್ಲಿ ಮನೆ ನಿರ್ಮಾಣದ ಕಾರ್ಯಾದೇಶ ಪತ್ರವನ್ನು ಸಂಸದರು ಹಾಗೂ ಶಾಸಕರು ವಿತರಿಸಲಾಯಿತು. ಇದೇ ಸಂದರ್ಭಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಕಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಮಾಲತೇಶ ಸೊಪ್ಪಿನ, ಹಾನಗಲ್ ಎ.ಪಿ.ಎಂ.ಸಿ ಅಧ್ಯಕ್ಷ ಶೇಕಪ್ಪ ಮಹಾರಾಜಪೇಟ, ಉಪಾಧ್ಯಕ್ಷೆ ಸುಜಾತಾ ಪಸಾರದ, ತಹಶೀಲ್ದಾರ ಗಂಗಪ್ಪ ಎಂ., ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಾಹಕ ಚನ್ನಪ್ಪ ರಾಯಣ್ಣನವರ, ಎಂ.ಬಿ.ಕಲಾಲ, ಜಿ.ಪಂ.ಮಾಜಿ ಸದಸ್ಯ ಪದ್ಮನಾಭ ಕುಂದಾಪುರ, ಕೆ.ಸಿ.ಸಿ.ಬ್ಯಾಂಕಿನ ದೇಸಾಯಿ, ಶಿದ್ಲಿಂಗಪ್ಪ,ನಿಂಗಪ್ಪ, ಚಂದ್ರಣ್ಣ, ಕೃಷ್ಣಯ್ಯ, ಬೂದಿಹಾಳ ಇತರರು ಉಪಸ್ಥಿತರಿದ್ದರು. ವಕೀಲರಾದ ರಾಜು ಗೌಳಿ ಸ್ವಾಗತಿಸಿದರು.