ತಹಸೀಲ್ದಾರ್ ಶಿವಕುಮಾರಗೆ ರಜೆ ಶಿಕ್ಷೆ

Share

ಹಾವೇರಿ: ತಾಲೂಕಿನಲ್ಲಿ ಅತಿವೃಷ್ಟಿಯಿಂದಾದ ಹಾನಿಯ ಸಮರ್ಪಕ ವರದಿ ಹಾಗೂ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವಲ್ಲಿ ವಿಫಲಗೊಂಡ ತಹಸೀಲ್ದಾರ್ ಎಚ್.ಸಿ. ಶಿವಕುಮಾರ ಅವರನ್ನು ರೆಜೆ ಮೇಲೆ ಕಳಿಸಿ, ರಾಣೆಬೆನ್ನೂರ ಗ್ರೇಡ್-2 ತಹಸೀಲ್ದಾರ್ ಶಂಕರ ಜಿ.ಎಸ್. ಅವರಿಗೆ ಪ್ರಭಾರ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ವಹಿಸಿದ್ದಾರೆ.

ತಾಲೂಕಿನಲ್ಲಿ ನೆರೆ ಬಾಧಿತ ಗ್ರಾಮಗಳ ಪೂರ್ಣಪಟ್ಟಿ, ಪರಿಹಾರ ಕೇಂದ್ರಗಳ ಮಾಹಿತಿ ಹಾಗೂ ಸಕಾಲದಲ್ಲಿ ತುರ್ತು ಪರಿಹಾರ ವಿತರಿಸುವಲ್ಲಿ ತಹಸೀಲ್ದಾರ್ ಎಚ್.ಸಿ. ಶಿವಕುಮಾರ ಅವರು ನಿರ್ಲಕ್ಷ್ಯ ವಹಿಸಿದ್ದರು. ಈ ಕುರಿತು ಆ. 24ರಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ನಿರ್ಲಕ್ಷ್ಯ ಮುಂದುವರಿಸಿದ ಪರಿಣಾಮ ಅವರ ಮೇಲೆ ಕ್ರಮ ವಹಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ರಜೆ ಮೇಲೆ ತೆರಳುವಂತೆ ಸೂಚಿಸಿ, ಸೋಮವಾರದಿಂದ ಹಾವೇರಿ ತಹಸೀಲ್ದಾರ್ (ಪ್ರಭಾರ) ಹೊಣೆಯನ್ನು ರಾಣೆಬೆನ್ನೂರ ಗ್ರೇಡ್-2 ತಹಸೀಲ್ದಾರ್ ಶಂಕರ ಅವರಿಗೆ ವಹಿಸಿದ್ದಾರೆ.

48 ಗಂಟೆಗಳಲ್ಲಿ ತುರ್ತು ಪರಿಹಾರ ವಿತರಣೆ: ಜಿಲ್ಲಾಧಿಕಾರಿ ಕೈಗೊಂಡ ತುರ್ತು ನಿರ್ಣಯಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಪ್ರಭಾರ ತಹಸೀಲ್ದಾರ್ ಶಂಕರ 48 ಗಂಟೆಗಳ ಅವಧಿಯಲ್ಲಿ ಪರಿಹಾರ ವಿತರಿಸಿದ್ದಾರೆ. ನೆರೆಯಿಂದ ಪೂರ್ಣವಾಗಿ ಮನೆ ಕಳೆದುಕೊಂಡ ಹಾಗೂ ನೀರು ನುಗ್ಗಿ ಪಾತ್ರೆ, ದವಸ, ಧಾನ್ಯ, ಬಟ್ಟೆಗಳನ್ನು ಕಳೆದುಕೊಂಡ 1,042 ಕುಟುಂಬಗಳಿಗೆ 10 ಸಾವಿರ ರೂ.ಗಳನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಿಸಿದ್ದಾರೆ. ಭಾಗಶಃ (ಶೇ. 15ರಿಂದ 25ರಷ್ಟು) ಕುಸಿತಗೊಂಡ 2,545 ಮನೆಗಳ ಫಲಾನುಭವಿಗಳಿಗೆ 1,14,39,400 ರೂ.ಗಳ ಪರಿಹಾರ ವಿತರಿಸಿದ್ದಾರೆ. ನೆರೆ ಹಾಗೂ ಮಳೆಯಿಂದಾಗಿ ಮೃತಪಟ್ಟ 66 ಜಾನುವಾರುಗಳಿಗೆ 3,01,000 ರೂ.ಗಳ ಪರಿಹಾರ ಧನ ಜಮೆ ಮಾಡಿದ್ದಾರೆ. ಮಳೆಯಿಂದ ಬಿದ್ದಿದ್ದ 14 ಜಾನುವಾರು ಕೊಟ್ಟಿಗೆಗಳಿಗೆ 29,400 ರೂ. ಜಮೆ ಮಾಡಿಸಲಾಗಿದೆ.