ಜನತಾ ಕರ್ಪ್ಯೂ: ಹಾವೇರಿ ಜಿಲ್ಲೆ ಸಂಪೂರ್ಣ ಸ್ತಬ್ಧ

Share

ಹಾವೇರಿ: ಕರೋನಾ (ಕೋವಿಡ್-19) ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರದಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ಭಾನುವಾರ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

ತುರ್ತು ಸೇವೆಗಳನ್ನು ಹೊರತು ಪಡಿಸಿ ಇತರೆ ಯಾವುದೇ ಸೇವೆಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದ ಕಾರಣ ಹೋಟೆಲ್‍ಗಳು ಬಂದ್ ಆಗಿದ್ದವು. ಔಷಧಿ ಮಳಿಗೆಗಳು, ಆಸ್ಪತ್ರೆ ಹೊರತು ಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಜನತೆ ಸ್ವಯಂ ಪೇರಿತವಾಗಿ ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.

ನಗರದ ಲಾಲ್ ಬಹದ್ದೂರ ಶಾಸ್ತ್ರಿ ತರಕಾರಿ ಮಾರುಕಟ್ಟೆ, ಎಪಿಎಂಸಿ, ಗಾಂಧಿ ವೃತ್ತ, ಸುಭಾಸ್ ಸರ್ಕಲ್ ಸೇರಿದಂತೆ ಅನೇಕ ಭಾಗಗಳಲ್ಲಿ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆದ್ಯಂತ ಸೆಕ್ಷನ್ 144 ಜಾರಿಯಲ್ಲಿದ್ದು, ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆ ಮಾತ್ರ ಲಭ್ಯವಿದೆ. ಜಿಲ್ಲೆಯ ಎಲ್ಲ ತಾಲೂಕು, ಗ್ರಾಮೀಣ ಭಾಗದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಬಸ್, ರೈಲ್ವೆ ಸೇವೆ ಸ್ಥಗಿತ: ಜನತಾ ಕರ್ಪ್ಯೂಗೆ ಟ್ಯಾಕ್ಸಿ ವಾಹನ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಹಾಗೂ ರಾಜ್ಯ ಸರಕಾರಿ ಸಾರಿಗೆ ಸಂಸ್ಥೆ ಬೆಂಬಲ ಸೂಚಿಸಿದ ಪರಿಣಾಮ ಭಾನುವಾರ ಯಾವುದೇ ವಾಹನಗಳು ರಸ್ತೆಗೆ ಇಳಿಯಲ್ಲ. ಇನ್ನೂ ಬಂದ್ ವೇಳೆಯಲ್ಲಿ ಹುಬ್ಬಳ್ಳಿ ಪಾಸ್ಟ್ ಪ್ಯಾಸೆಂಜರ್ ಹಾಗೂ ತಿರುನೆಲ್ವೇಲಿ ಚಾಲುಕ್ಯ ಎಕ್ಸಪ್ರೈಸ್ ರೈಲು ಗಾಡಿಗಳು ಮಾತ್ರ ಸಂಚರಿಸಿದ ಪರಿಣಾಮ ಪ್ರಯಾಣಿಕರಿಲ್ಲದೆ ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಕೇಂದ್ರ ಬಸ್ ನಿಲ್ದಾಣದಲ್ಲಿ ಥರ್ಮಲ್ ಟೆಸ್ಟ್: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯ ಸರಕಾರಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಥರ್ಮಲ್ ಟೆಸ್ಟ್ ಒಳಪಡಿಸಿದರೆ, ರೈಲ್ವೆ ನಿಲ್ದಾಣದಲ್ಲಿ ಹೆಲ್ತ ಡೆಸ್ಕ್ ಸಿಬ್ಬಂದಿ ಬಳಿ ಥರ್ಮಲ್ ಟೆಸ್ಟ್ ಉಪಕರಣ ಇಲ್ಲದಿರುವುದು ಕಂಡು ಬಂದಿತು. ಕರೋನಾ (ಕೋವಿಡ್-19) ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಿಲ್ಲದೆ ಬಣಗೂಡುತ್ತಿದ್ದ ಕೇಂದ್ರ ಬಸ್ ನಿಲ್ದಾಣವನ್ನು ಔಷಧಿ ಸಿಂಪಡಿಸುವ ಮೂಲಕ ಸ್ವಚ್ಚಗೊಳಿಸುವಲ್ಲಿ ಕೆಲ ಸಿಬ್ಬಂದಿ ನಿರತರಾಗಿದ್ದರು.

ಜನತಾ ಕರ್ಪ್ಯೂ ಮಧ್ಯಯೂ ಸೇವೆ ಮುಂದುವರೆಸಿದ ಪೌರ ಕಾರ್ಮಿಕರು: ನಗರದಲ್ಲಿ ಭಾನುವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದರೆ, ಪೌರ ಕಾರ್ಮಿಕರು ಮಾತ್ರ ಎಂದಿನಂತೆ ಜನರ ಸೇವೆಯಲ್ಲಿ ನಿರತರಾಗಿದ್ದರು. ಮುಖಕ್ಕೆ ಬಟ್ಟೆ ಧರಿಸಿ, ಕೈಗೆ ರಕ್ಷಣಾ ಕವಚ ಹಾಕಿಕೊಂಡು ನಗರದಲ್ಲಿನ ರಸ್ತೆಯಲ್ಲಿ ಬಿದ್ದ ಕಸ ಗೂಡಿಸಿ ರಸ್ತೆ ಸ್ವಚ್ಚ ಮಾಡುವ ಮೂಲಕ ಜನತೆಗೆ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಸಂದೇಶ ನೀಡಿದ್ದರು.

ಚಪ್ಪಳೆ ಮೂಲಕ ಗೌರವ: ಮಹಾಮಾರಿ ಕರೋನಾ (ಕೋವಿಡ್-19) ವೈರಸ್ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಜಿಲ್ಲಾದ್ಯಂತ ಚಪ್ಪಾಳೆ ತಟ್ಟುವ ಮೂಲಕ ಗೌರವವನ್ನು ಸೂಚಿಸಲಾಯಿತು.

ಜನತಾ ಕರ್ಪ್ಯೂನಿಂದ ನಗರದ ಹೋಟೆಲ್, ಅಂಗಡಿಗಳು ಬಂದ್ ಆದ ಹಿನ್ನಲೆಯಲ್ಲಿ ನೀರು, ಆಹಾರ ಸಿಗದೇ ಹಸುವಿನಿಂದ ಬಳಲುತ್ತಿದ್ದ ಭಿಕ್ಷುಕರಿಗೆ ಹಾವೇರಿಯ ಕೆಲ ಯುವಕರು ಸ್ವಯಂ ಸೇವಕರು ಪಲಾವ್ ವಿರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.