ಕೊರೋನ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಜಾರಿಗೊಳಿಸಿರುವ ನಿಷೇಧಾಜ್ಞೆ ಜಾರಿಗೆ ತೀವ್ರ ಕ್ರಮ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ

Share

ಹಾವೇರಿ: ಭಾರತವೂ ಸೇರಿದಂತೆ ವಿಶ್ವಾದ್ಯಂತ ಮಹಾಮಾರಿಯಾಗಿ ಹಬ್ಬುತ್ತಿರುವ ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಪ್ರತ್ಯೇಕತೆಯನ್ನು ಅಳವಡಿಸಿಕೊಳ್ಳುವುದು ಅತೀ ಪ್ರಾಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಜಾರಿಗೊಳಿಸಲಾದ ನಿಷೇಧಾಜ್ಞೆಯನ್ನು ಜಾರಿಗೊಳಿಸಲು ಗ್ರಾಮ ಪಂಚಾಯತಿಯಿಂದ ಜಿಲ್ಲಾ ಮಟ್ಟದವರೆಗೂ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಕಂದಾಯ ಕ್ಷೇತ್ರ ಅಧಿಕಾರ ವ್ಯಾಪ್ತಿಯಲ್ಲಿ ದಿನಾಂಕ :23-03-2020 ರಿಂದ ಸಮಯದಿಂದ 01-04-2020ರ 00.00 ಸಮಯದವರೆಗೆ ವಿಧಿಸಿ ಆದೇಶಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾವಹಿಸಲು ಗ್ರಾಮ ಮಟ್ಟದಿಂದ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಪಿ.ಡಿ.ಓ.ಗಳು, ಆರ್.ಟಿ.ಓ.ಗಳು ಕೊರೋನಾ ಹರಡವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಾರ್ಗಸೂಚಿಯನ್ನು ಜಾರಿಗೊಳಿಸಲು ಮತ್ತು ಅನುಷ್ಠಾನಗೊಳಿಸಲು ಎಲ್ಲಾ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ ನಿಷೇಧ : ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಕಛೇರಿಗಳು (ಸರ್ಕಾರ ಸೂಚಿಸಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ) ಕಾರ್ಯಾಗಾರಗಳು, ಉಗ್ರಾಣಗಳು, ಅವುಗಳ ವ್ಯವಹಾರವನ್ನು ಸ್ಥಗಿತಗೊಳಿಸತಕ್ಕದ್ದು. (ಅಗತ್ಯ ಸರಕುಗಳು ಮತ್ತು ಸೇವೆಗಳೊಂದಿಗೆ ವ್ಯವಹರಿಸುವ, ಆಹಾರ, ವೈದ್ಯಕೀಯ ಉಪಕರಣ, ಔಷಧಿಗಳು, ಇಂಧನ, ಕೃಷಿ ಉಪಕರಣಗಳು ಇತ್ಯಾದಿ ಹೊರತುಪಡಿಸಿ) ಎಲ್ಲಾ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ತಮ್ಮ ಕಾರ್ಯನಿರ್ವಹಣೆಗಳನ್ನು ಸ್ಥಗಿತಗೊಳಿಸತಕ್ಕದ್ದು. ಈ ಕಾರಣಕ್ಕಾಗಿ ಯಾವೊಬ್ಬ ಕೆಲಸಗಾರರನ್ನು ತೆಗೆದುಹಾಕುವಂತಿಲ್ಲ. ಹಾಗೂ ಉಳಿದೆಲ್ಲಾ ಕೆಲಸಗಾರರಿಗೆ ಈ ದಿನಗಳಲ್ಲಿ ವೇತನ ಸಹಿತ ರಜೆ ಮಂಜೂರು ಮಾಡುವಂತೆ ಸೂಚಿಸಲಾಗಿದೆ.

ವಿದೇಶದಿಂದ ಬಂದವರೆಲ್ಲರೂ ಹಾಗೂ ಅವರ ಮನೆಯವರು ಅವರ ಮನೆಯಲ್ಲಿ ಏಕಾಂತವನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು. ಮನೆಯೊಳಗಿನ ಏಕಾಂತವನ್ನು ಪಾಲಿಸುವುದನ್ನು ಉಲ್ಲಂಘಿಸುವವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂತಹವರನ್ನು ಸರ್ಕಾರಿ ಏಕಾಂತ ವಾಸಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ -19ರ ಶುಶ್ರೂಷಾ ಸೇವೆಯ ಉದ್ದೇಶಗಳನ್ನು ಮತ್ತು ಶಾಸನಬದ್ಧ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು ಹೊರತುಪಡಿಸಿ, ಐದು ವ್ಯಕ್ತಿಗಳಿಗಿಂತ ಹೆಚ್ಚಿನ ಎಲ್ಲಾ ಸಮೂಹ ಒಗ್ಗೂಡುವಿಕೆಯನ್ನು ನಿಷೇಧಿಸಲಾಗಿದೆ. ಎಲ್ಲಾ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕೆ ಮತ್ತು ಹಬ್ಬಗಳ ಒಗ್ಗೂಡುವಿಕೆಯನ್ನು ನಿಲ್ಲಿಸತಕ್ಕದ್ದು ಎಂದು ಆದೇಶಿಸಲಾಗಿದೆ.

ಯಾವುದೇ ಕಾರ್ಯ ಸಾಧುವಲ್ಲವೋ ಹಾಗೂ ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಘಟಕಗಳನ್ನು ಹೊರತುಪಡಿಸಿ, ಎಲ್ಲಾ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಘಟಕಗಳಲ್ಲಿನ ಕೆಲಸಕಾರ್ಯಗಳನ್ನು ಆಯಾ ನೌಕರರ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು (Woಡಿಞ ಜಿಡಿom ಊome) ಖಚಿತಪಡಿಸಿಕೊಳ್ಳತಕ್ಕದ್ದು ಎಂದು ತಿಳಿಸಿದ್ದಾರೆ.

ಅಂತರರಾಜ್ಯ, ಅಂತರ ಜಿಲ್ಲಾ ಮಟ್ಟದಲ್ಲಿ ಎಲ್ಲ ಸಾರಿಗೆ ಸೇವೆಗಳನ್ನು ರಸ್ತೆ ಸಾರಿಗೆ ನಿಗಮಗಳ, ಖಾಸಗಿ ಸಾರಿಗೆ ಕಾರ್ಯಾಚರಣೆಗಳನ್ನು ನಿಲ್ಲಿಸಲು ಆದೇಶಿಸಲಾಗಿದೆ. ಆದರೆ ಅನುಮತಿಸಿರುವ ವಿನಾಯಿತಿ ಹೊಂದಿರುವ ಖಾಸಗಿ ವಾಹನಗಳು ಅಗತ್ಯ ವಸ್ತುಗಳನ್ನು ಸಾಗಿಸಲು ಮಾತ್ರ ಬಳಕೆಯಾಗತಕ್ಕದ್ದು ಎಂದು ತಿಳಿಸಿದ್ದಾರೆ. ಅಗತ್ಯ ಸರಕುಗಳನ್ನು ಸಂಗ್ರಹಿಸಲು ಮತ್ತು ವೈದ್ಯಕೀಯ ತುರ್ತುಗಳಿಗೆ ಹಾಜರಾಗುತ್ತಿರುವ ವಾಹನಗಳನ್ನು ಹೊರತುಪಡಿಸಿ, ಪ್ರಯಾಣಿಕರಿಗೆ ಎಲ್ಲಾ ಟ್ಯಾಕ್ಸಿ, ಆಟೋ ರಿಕ್ಷಾ ಮತ್ತು ಇತರೆ ಬಾಡಿಗೆ ಸೇವೆಗಳನ್ನು ಬಳಸುವುದನ್ನು ನಿಷೇಧಿಸಿದೆ.

ಸರ್ಕಾರವು ಅಧಿಸೂಚಿಸಿರುವ ಅಗತ್ಯೇತರ ಸೇವೆಗಳನ್ನು ನೀಡುವ ಎಲ್ಲಾ ಕಛೇರಿ ಸೇವೆಗಳನ್ನು ಸ್ಥಗಿತಗೊಳಿಸತಕ್ಕದ್ದು.ಜೆ) ವೈದ್ಯಕೀಯ ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತುಪಡಿಸಿ, ನೆರೆ ರಾಜ್ಯದಿಂದ ಬರುವ ವಾಹನಗಳ ಚಲನ-ವಲನ ನಿಲ್ಲಿಸತಕ್ಕದ್ದು. ಆದಾಗ್ಯೂ, ಮೇಲಿನ ನಿರ್ಬಂಧಗಳ ಕಾರ್ಯಾಚರಣೆಯಿಂದ ಈ ಕೆಳಗಿನ ಸರಕು ಮತ್ತು ಸೇವೆಗಳನ್ನು ಒದಗಿಸುವ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವಿನಾಯಿತಿ : ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನ ಬಳಕೆ ವಸ್ತುಗಳು, ಮಾಂಸ, ಮೀನು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು. ಪೆಟ್ರೋಲ್ ಬಂಕ್‍ಗಳು, ಗ್ಯಾಸ್, ಎಲ್.ಪಿ.ಜಿ., ತೈಲ ಏಜೆನ್ಸಿಗಳು ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು, ಎಲ್ಲಾ ಸರಕು ಸಾಗಣೆಗಳು, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಔಷಧಾಲಯಗಳು, ಆಪ್ಟಿಕಲ್ ಅಂಗಡಿಗಳು, ರೋಗ ಪರೀಕ್ಷಾ ಕೇಂದ್ರಗಳು ಮತ್ತು ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಇತರೆ ಅಂಗಡಿಗಳು ಹಾಗೂ ಅವುಗಳ ಉಗ್ರಾಣಗಳು, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಕಛೇರಿಗಳು ಹಾಗೂ ಅಂಚೆ ಸೇವೆಗಳು, ಸರ್ಕಾರವು ಅಧಿಸೂಚಿಸಿದಂತೆ ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಕಛೇರಿಗಳು, ವಿದ್ಯುಚ್ಛಕ್ತಿ, ನೀರು ಪೂರೈಕೆ ಮತ್ತು ಪೌರ ಸೇವೆಗಳು, ಬ್ಯಾಂಕ್ ಟೆಲ್ಲರ್ ಸೇವೆಗಳು, ಎ.ಟಿ.ಎಂ. ಗಳು, ಟೆಲಿಕಾಂ, ಅಂತರ್ಜಾಲ ಕೇಬಲ್ ಸೇವೆಗಳು,) ಸರಕು ಮತ್ತು ಸೇವೆಗಳು, ಇ-ಕಾಮರ್ಸ್/ಹೋಂ ಡೆಲಿವರಿ, ರೆಸ್ಟೋರೆಂಟ್ ಗಳಿಂದ ಕೊಂಡೊಯ್ಯುವ- ಹೋಂ ಡೆಲಿವರಿ, ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಒದಗಿಸುವ ಕ್ಯಾಂಟೀನ್ ಸೇವೆಗಳು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಖಾಸಗಿ ಭದ್ರತಾ ಸೇವೆಗಳನ್ನು ಒಳಗೊಂಡ ಭದ್ರತಾ ಸೇವೆಗಳು, ವ್ಯಾಪಕವಾಗಿ ಮತ್ತು ಕಂಟೈನರ್‍ಗಳಲ್ಲಿ ಕುಡಿಯುವ ನೀರಿನ ತಯಾರಿಕೆ, ಸರಬರಾಜು ಮತ್ತು ವಿತರಣೆ, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಿಗೆ ಸಂಬಂಧಿಸಿದ ಸೇವೆಗಳು, ಔಷಧಿಗಳು, ಮುಖ ಗವಸುಗಳು, ಪಿ.ಪಿ.ಇ., ಇತ್ಯಾದಿ ಉತ್ಪಾದನೆಯನ್ನು ಒಳಗೊಂಡ ಕೋವಿಡ್-19 ಶುಶ್ರೂಷೆಗೆ ಸಂಬಂಧಿಸಿದ ಸಂಸ್ಥೆಗಳ ಸೇವೆಗಳಿಗೆ ವಿನಾಯಿತಿ ಇದೆ ಎಂದು ತಿಳಿಸಿದ್ದಾರೆ.

ಸದರಿ ಆದೇಶದ ಯಾವುದೇ ನಿಯಮವನ್ನು ಉಲ್ಲಂಘಿಸುವ ವ್ಯಕ್ತಿ, ಸಂಸ್ಥೆ, ಸಂಘಟನೆ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ, ಭಾರತ ದಂಡ ಸಂಹಿತೆ 188ನೇ ಪ್ರಕರಣ ಮತ್ತು ಇತರ ಸಂಬಂಧಪಟ್ಟ ಸಂಹಿತೆಗಳು, ಅಧಿನಿಯಮಗಳ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಮೂಲಕ ವ್ಯವಹರಣೆಗೆ ಗುರಿಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.