ಕೈ’ ಕೊಟ್ಟ ವಿಶ್ವಾಸ, ರಾಜ್ಯ ದೋಸ್ತಿ ಸರಕಾರ ಪತನ

Share

ಬೆಂಗಳೂರು: ಮಂಗಳವಾರ ನಡೆದ ವಿಶ್ವಾಸ ಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು, 14 ತಿಂಗಳ ದೋಸ್ತಿ ಸರಕಾರ ಪತನಗೊಂಡಿದೆ.

ಸ್ಪೀಕರ್ ರಮೇಶ್ ಕುಮಾರ್ ಬಹುಮತ ನಿರ್ಣಯಕ್ಕೆ ಹಾಕಿದಾಗ ಸದನದಲ್ಲಿ ಹಾಜರಿದ್ದ 205 ಶಾಸಕರಲ್ಲಿ ಬಹುಮತಕ್ಕೆ ಮ್ಯಾಜಿಕ್ ಸಂಖ್ಯೆ 103 ಆಗಿತ್ತು. ಈ ಸಂದರ್ಭದಲ್ಲಿ ದೋಸ್ತಿ ಸರಕಾರದ ಪರವಾಗಿ 99 ಹಾಗೂ ವಿರೋಧವಾಗಿ 105 ಮತಗಳು ಚಲಾವಣೆಗೊಂಡವು.
ಈ ಮೂಲಕ 14 ತಿಂಗಳಿನಿಂದ ಅಸ್ತಿತ್ವದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ತನ್ನ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಪತನವಾಯಿತು.

ವಿಶ್ವಾಸ ಮತಯಾಚನೆ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಇದು ಪ್ರಜಾಪ್ರಭುತ್ವದ ಗೆಲುವಾಗಿದ್ದು, ಮುಂದಿನ ದಿನಗಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅನ್ನದಾತ ರೈತರ ಬಗ್ಗೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು.