‘ಕೆಫೆ’ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಇನ್ನಿಲ್ಲ

Share

ಬೆಂಗಳೂರು: ಮಂಗಳೂರು-ಉಳ್ಳಾಲ ರಸ್ತೆಯ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದ ಉದ್ಯಮಿ ವಿ. ಜಿ ಸಿದ್ದಾರ್ಥ ಅವರ ಮೃತ ದೇಹ ಬುಧವಾರ ಬೆಳಗ್ಗೆ ನದಿಯ ಹಿನ್ನೀರು ಪ್ರದೇಶ ಹೊಯ್ಗೆ ಬಜಾರ್ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ. ಸತತ 36 ಗಂಟೆಗಳ ಕಾರ್ಯಾಚರಣೆ ಬಳಿಕ ಸಿದ್ದಾರ್ಥ ಶವ ಪತ್ತೆ ಹಚ್ಚಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ, ಕರ್ನಾಟಕದ ಪ್ರಮುಖ ಉದ್ಯಮಿ ವಿ.ಜಿ ಸಿದ್ದಾರ್ಥ ಅವರ ಯಶೋಗಾಥೆ ಈ ಮೂಲಕ ದುರಂತ ಅಂತ್ಯ ಕಂಡಿದೆ.

ಸೋಮವಾರ(ಜುಲೈ 29) ಸಂಜೆ 6 ಗಂಟೆ ಸುಮಾರಿಗೆ ಮಂಗಳೂರು- ಉಳ್ಳಾಲ ರಸ್ತೆಯ ಬಳಿಯಿರುವ ನೇತ್ರಾವತಿ ನದಿ ಬಳಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು, ನೇತ್ರಾವತಿ ಸೇತುವೆ ಬಳಿ ಇನ್ನೋವಾ ಕಾರು ಚಲಿಸುತ್ತಿದ್ದಂತೆ, ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ಕಾರನ್ನು ಯೂ ಟರ್ನ್ ಮಾಡಿ ಬಂದ ಚಾಲಕನಿಗೆ ಕಾರಿನಲ್ಲೇ ಕುಳಿತಿರುವಂತೆ ಸೂಚಿಸಿ ಸೇತುವೆ ಬಳಿಯಿಂದ ಕಣ್ಮರೆಯಾಗಿದ್ದರು.

ಸ್ಥಳೀಯ ಮೀನುಗಾರರು ಬುಧವಾರ ಬೆಳಗ್ಗೆ ನದಿ ನೀರಿನಲ್ಲಿ ಮೀನಿಗಾಗಿ ಬಲೆ ಬೀಸಲು ಮುಂದಾದಾಗ, ಶವ ಪತ್ತೆಯಾಗಿದೆ, ತಕ್ಷಣವೇ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮೀನುಗಾರ ಅಬ್ಸೆ ಬಜಾರಿನ ರಿತೇಶ್, “ಹೊಯ್ಗೆ ಬಜಾರ್ ಎಂಬಲ್ಲಿ ಮೃತ ದೇಹ ಪತ್ತೆಯಾಗಿದೆ. ನಿನ್ನೆ ಕೂಡಾ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದೆ, ಮಳೆ ಕಾರಣ ನಿನ್ನೆ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು, ಬೆಳಗ್ಗೆ 6.45ರ ಸುಮಾರಿಗೆ ನದಿಗೆ ಇಳಿದ ಸ್ವಲ್ಪ ಹೊತ್ತಿನಲ್ಲೇ ಮೃತದೇಹ ಕಂಡಿದೆ” ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ. ಮೃತದೇಹದ ಪರಿಶೀಲನೆ ನಡೆಸಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಕುಟುಂಬಸ್ಥರು, ಸಂಬಂಧಿಕರು ನಿರ್ಧಾರದಂತೆ ಮರಣೋತ್ತರ ಪರೀಕ್ಷೆ ಮುಂದಿನ ಕಾರ್ಯಗಳು ನಡೆಯಲಿವೆ.