ಅಂಗವಿಕಲರ ಪತ್ತೆ ಕಾರ್ಯ ಶೀರ್ಘವಾಗಬೇಕು: ವಿ.ಎಸ್.ಬಸವರಾಜ

Share

ಹಾವೇರಿ: ಅಂಗವಿಕರ ಹಕ್ಕುಗಳ ಜವಾಬ್ದಾರಿ ಎಲ್ಲ ಇಲಾಖೆಯ ಅಧಿಕಾರಿಗಳ ಮೇಲೆ ಇದ್ದು, ಶೇ.5% ಹಣವನ್ನು ಇಲಾಖೆಗಳು ಪ್ರತ್ಯೇಕವಾಗಿ ತೆಗೆದಿಟ್ಟು ಅವರ ಅಭಿವೃದ್ಧಿಗೆ ವಿಶೇಷ ಕೌಶಲ್ಯಯುತ ಕಾರ್ಯಕ್ರಮಗಳನ್ನು ಯೋಜಿಸುವ ಮೂಲಕ ಅವರಲ್ಲಿ ಆತ್ಮಸೈರ್ಯ ತುಂಬಬೇಕೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್. ಬಸವರಾಜ ಅವರು ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ಸಹಾಯ ಮಾಡುವ ಹಂತದಲ್ಲಿ ಅವರ ಕುಟುಂಬವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜೊತೆಗೆ ಅವರನ್ನು ಗುರುತಿಸುವ ಕಾರ್ಯ ಬಹಳ ವಿಳಂಬವಾಗುತ್ತಿದ್ದು, ಪತ್ತೆ ಕಾರ್ಯ ಶೀರ್ಘವಾಗುವುದರೊಂದಿಗೆ ಅಂಗವಿಕಲರ ಪುನರ್ ಚೇತನವಾಗಬೇಕು ಎಂದರು.

ಜಿಲ್ಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದು, ಈಗ ಇರುವ ಯೋಜನೆಗಳು ಅವರ ಅಭಿವೃದ್ಧಿಗೆ ಪೂರಕವಾಗಿಲ್ಲ. ಅಂಗವಿಕಲರೆಲ್ಲ ಮನೆಯಿಂದ ಹೊರ ಬಂದಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ ಎಂದ ಅವರು ಡಿಎಸ್.ಎಸ್ ಸೆಂಟರ್ ಜಿಲ್ಲೆಯಲ್ಲಿ ಆದಷ್ಟು ಬೇಗ ಪ್ರಾರಂಭವಾಗಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ನಕಲಿ ಅಂಗವಿಕಲತೆ ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡ ದೂರು ಬಂದ ಹಿನ್ನಲೆಯಲ್ಲಿ ತಕ್ಷಣವೇ ತನಿಖೆಗೆ ಆದೇಶಿಸಲಾಗಿದ್ದು, ಮರು ವೈದ್ಯಕೀಯ ತಪಾಸಣಾ ಪ್ರಮಾಣ ಪತ್ರವನ್ನು ಎಲ್ಲ ಅಂಗವಿಕಲ ಶಿಕ್ಷಕರು ನೀಡುವಂತೆ ಸೂಚಿಸಲಾಗಿದೆ. ನಕಲಿ ಅಂಗವಿಕಲ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.