ಖಾಕಿ ಪಡೆಯ ಪರಿಸರ ಪ್ರೇಮ: ಪೊಲೀಸರಿಂದ ‘ಬೀಟ್‌ಗೊಂದು ಮರ ಅಭಿಯಾನ’

Share

ಹುಬ್ಬಳ್ಳಿ, ಜುಲೈ 6 : ಪೊಲೀಸ್ ಇಲಾಖೆ ಕಾರ್ಯವೈಖರಿ ಮತ್ತೊಂದು ಸಾಮಾಜಿಕ ಜವಾಬ್ದಾರಿಗೆ ಮುಂದಾಗಿದೆ‌. ಕಳ್ಳರ, ವಂಚಕರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದ ಪೊಲೀಸರು ಈಗ ಪರಿಸರ ಬಗ್ಗೆ ಕಾಳಜಿ ತೋರುತ್ತಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಸಾಕಷ್ಟು ಜನಮನ್ನಣೆ ಪಡೆದಿದೆ. ಈಗ ಹು-ಧಾ ಕಮಿಷನರೇಟ್ ಪರಿಸರ ಕಾಳಜಿ ಮೆರೆಯುತ್ತಿದೆ. ಗೋಕುಲ ರೋಡ್‌ ಠಾಣೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಆಯೋಜಿಸಿರುವ ‘ಬೀಟ್‌ಗೊಂದು ಮರ ಅಭಿಯಾನ’ಕ್ಕೆ ಇಂದು ಚಾಲನೆ ನೀಡಲಾಯಿತು. ಗೋಕುಲ್ ಠಾಣೆ ಇನ್ಸ್​​ಪೆಕ್ಟರ್​ ಜೆ. ಎಂ. ಕಾಲಿಮಿರ್ಚಿ ಅವರ ನೇತೃತ್ವದಲ್ಲಿ ಕೊಲ್ಲೂರು ಲೇಔಟ್ ಹಾಗೂ ಅಕ್ಷಯ್ ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

ಮನುಷ್ಯ ಮಾಡಿದ ತಪ್ಪಿಗೆ ಕೊರೊನಾದಂತಹ ರೋಗಗಳು ಸೃಷ್ಟಿಯಾಗುತ್ತಿವೆ. ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನೂ ಖರೀದಿಸಬೇಕಾದ ದುಸ್ಥಿತಿ ಬಂದಿದೆ‌. ನಿಸರ್ಗದತ್ತವಾದ ಸಸ್ಯ ಸಂಪತ್ತನ್ನು ಉಳಿಸಿಕೊಂಡು ಹೋಗಲೆಬೇಕು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಹು-ಧಾ ಪೊಲೀಸ್ ಕಮಿಷನರೇಟ್ ಕೈಗೆತ್ತಿಕೊಂಡಿದೆ. ಠಾಣೆಯ 68 ಬೀಟ್‌ನಲ್ಲಿ 68 ಸಸಿ ನೆಟ್ಟು ಪೋಷಿಸಲಾಗುವುದು. ಅದಕ್ಕೆ ‘ಪೊಲೀಸ್ ಮರ’ ಎಂದು ನಾಮಕರಣ ಮಾಡಲಾಗಿದೆ. ಇದಕ್ಕೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯರು ಕೈಜೋಡಿಸಿರುವುದು ವಿಶೇಷವಾಗಿದೆ.