ಹಿಜಾಬ್; ತೀರ್ಪು ಬರುವವರೆಗೆ ಪರೀಕ್ಷೆ ಮುಂದೂಡಿ

Share

ಉಡುಪಿ, ಫೆಬ್ರವರಿ 23: ರಾಜ್ಯದಲ್ಲಿ ಹಿಜಾಬ್ ಕಿಡಿ ಹೊತ್ತಿಸಿದ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಮತ್ತೆ ಮಾಧ್ಯಮಗಳ ಮುಂದೆ ಹಾಜರಾಗಿದ್ದಾರೆ.

ಹೈಕೋರ್ಟ್ ತೀರ್ಪು ಬರುವವರೆಗೂ ಕಾಲೇಜುಗಳು ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ವಿದ್ಯಾರ್ಥಿನಿಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೈಕೋರ್ಟ್ ತೀರ್ಪು ಬರುವವರೆಗೂ ಕಾಲೇಜುಗಳು ಕಾಯಬೇಕು. ಕಾಲೇಜುಗಳು ಪರೀಕ್ಷೆಗಳನ್ನು ಮುಂದೂಡಬೇಕು. ಹಿಜಾಬ್ ಪ್ರಕರಣ ಇತ್ಯರ್ಥ ಆದ ಬಳಿಕ ಪರೀಕ್ಷೆಗಳನ್ನು ಮಾಡಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರತಿದಿನ ಅರ್ಜಿ ವಿಚಾರಣೆ ನಡೆಯುತ್ತಿದೆ.

“ಹಿಜಾಬ್ ಬೇಡಿಕೆಗೆ ಕೋಮು ಬಣ್ಣವನ್ನು ರಾಜಕೀಯ ಪಕ್ಷಗಳು ಹಾಕಿವೆ. ಕೆಲ ರಾಜಕಾರಣಿಗಳು ಬೇಕಂತಲೇ ಈ ವಿಚಾರದಲ್ಲಿ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ನಮಗೆ ಕೋರ್ಟ್ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಕೋರ್ಟ್ ತೀರ್ಪು ಶೀಘ್ರದಲ್ಲೇ ಬರಬೇಕು. ‌ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸ ಇದೆ” ಎಂದರು.

“ಹಿಜಾಬ್ ಕುರಿತ ಹೋರಾಟಕ್ಕೆ ಭಯೋತ್ಪಾದಕ ಸಂಘಟನೆಗಳ ನೆರವು ಇದೆ ಅಂತಾ ಹಲವು ಆರೋಪಿಸಿದ್ದಾರೆ. ಆದರೆ ಈ ಆರೋಪಗಳಿಗೆ ನಾವು ಉತ್ತರಿಸೋದಿಲ್ಲ. ಇದು ಸಂಪೂರ್ಣ ಸುಳ್ಳು ಎಂದ ವಿದ್ಯಾರ್ಥಿನಿಯರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಆಲಿಯಾ ಅಸಾದಿ, “ಕಳೆದ ಒಂದು ತಿಂಗಳಿನಿಂದ‌ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದೆ. ನಮ್ಮ ವೈಯುಕ್ತಿಕ ಮಾಹಿತಿಗಳು ಈಗಾಗಲೇ ಸೋರಿಕೆಯಾಗಿದೆ. ನಮ್ಮ ಆರು ಮಂದಿ ವಿದ್ಯಾರ್ಥಿನಿಯ ಪೈಕಿ ಒರ್ವ ವಿದ್ಯಾರ್ಥಿನಿಯ ಹೆತ್ತವರು ಮತ್ತು ಸಹೋದರನ ಮೇಲೆ ಹಲ್ಲೆಗಳು ಆಗಿದೆ. ಅವರ ಹೋಟೆಲ್ ಮೇಲೆ ಕಲ್ಲೆಯೆಸಲಾಗಿದೆ” ಎಂದು ಆರೋಪ ಮಾಡಿದ್ದಾರೆ.

ಉಡುಪಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು, ವಿಜ್ಞಾನ ವಿಭಾಗದ ಲ್ಯಾಬ್ ಪರೀಕ್ಷೆಗಳು ಮತ್ತು ಇತರ ವಿಭಾಗದ ಸಪ್ಲಿಮೆಂಟರಿ ಪರೀಕ್ಷೆ ಗಳು ಸದ್ಯ ಕಾಲೇಜಿನಲ್ಲಿ ನಡೆಯುತ್ತಿದೆ. ಪರೀಕ್ಷೆಗಳಿಗೆ ಹಾಜರಾಗಲು ಕಾಲೇಜಿನಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮ ಶೈಕ್ಷಣಿಕ ಭವಿಷ್ಯ ಯಾರದ್ದೋ ರಾಜಕೀಯದಿಂದ ಬಲಿಯಾಗುತ್ತಿದೆ. ಈ ಬಗ್ಗೆ ಉಡುಪಿ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ‌‌. ಅವರ ಮೂಲಕ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಅಂತಾ ತಿಳಿಸಿದ್ದಾರೆ.

“ಹಿಜಾಬ್ ನಮ್ಮ ಧಾರ್ಮಿಕ ಹಕ್ಕು. ನಮ್ಮ ಧಾರ್ಮಿಕ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತೇವೆ. ಈ ಹೋರಾಟದಲ್ಲಿ ಪೋಷಕರನ್ನು ಎಳೆಯೋದು ಸರಿಯಲ್ಲ. ಹಿಜಾಬ್ ಹೋರಾಟಕ್ಕೆ ಸಿಎಫ್ಐ ಬೆಂಬಲ ನೀಡಿದೆ. ಕಳೆದ ಎರಡು ವರ್ಷಗಳಿಂದ ನಾವು ಸಿಎಫ್ಐ ಬೆಂಬಲಿಗರಾಗಿದ್ದೇವೆ. ಹೀಗಾಗಿ ಕಾನೂನು ಹೋರಾಟಕ್ಕೆ ಸಿಎಫ್ಐ ಬೆಂಬಲ ಕೇಳೋದು ತಪ್ಪು ಅಲ್ಲ” ಎಂದು ವಿದ್ಯಾರ್ಥಿನಿ ಆಲಿಯಾ ಅಸಾದಿ ಹೇಳಿದ್ದಾರೆ.