ಗಣಿತಜ್ಞ ರಾಮಾನುಜನ್ ಅವರ 134ನೇ ಜನ್ಮದಿನ ಆಚರಣೆ

Share

ಬಳ್ಳಾರಿ, 22: ದಿನವೂ ರಾತ್ರಿ 9 ಗಂಟೆವರೆಗೆ ಕಛೇರಿನಲ್ಲಿ ಕೆಲಸ, ಶನಿವಾರ, ಭಾನುವಾರ ಹಾಗೂ ಇನ್ನಿತರ ರಜಾ ದಿನಗಳಲ್ಲಿ ಎಡೆಬಿಡದೆ ಸೇವೆ ನಿರ್ವಹಿಸಿದ ಸಾರ್ಥಕ ಭಾವನೆಯು ಇಂದಿನ ಯುವಕರು ಕಂಪ್ಯೂಟರ್ (ಲ್ಯಾಪ್ಟಾಪ್)ನ್ನು ಹೆಗಲಿಗೇರಿಸಿಕೊಂಡು ಹೋಗುವುದು ನೋಡುವಾಗ ಉಂಟಾಗುತ್ತದೆ…

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)ದ ವತಿಯಿಂದ ಆಯೋಜಿಸಿದ್ದ ಶ್ರೀನಿವಾಸ್ ರಾಮಾನುಜನ್ ಅವರ 134ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಉತ್ತರಕರ್ನಾಟಕ  ಭಾಗದಲ್ಲಿ ಕಂಪ್ಯೂಟರ್ ವಿಜ್ಞಾನ ಶಿಕ್ಷಣವನ್ನು 80 ರ ದಶಕದಲ್ಲಿ ಪರಿಚಯಿಸಲು ಪಣತೊಟ್ಟು ಅದರ ಫಲಪ್ರದವನ್ನು ಇಂದು ನೋಡುತ್ತಿರುವ ಸಂಗತಿಯನ್ನು ವಿವರಿಸಿದ್ದು ಐಎನ್ಎಸ್ಎ ಹಿರಿಯ ವಿಜ್ಞಾನಿ ಪ್ರೊ. ಎನ್ ಎಂ ಬುಜುರ್ಕೆ  ಅವರು. ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)ದ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀನಿವಾಸ್ ರಾಮಾನುಜನ್ ಅವರ 134ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಎಂಸಿಎ ಕೋಸ್ರ್  ಮೈಸೂರು, ಸುರತ್ಕಲ್ ನಂತರ ಧಾರವಾಡದಲ್ಲಿ ಆರಂಭ ಮಾಡಿದ್ದು ಇತಿಹಾಸ. ಕಂಪ್ಯೂಟರ್ ಶಿಕ್ಷಣದಲ್ಲಿ ತಜ್ಞರಿಲ್ಲದಿರುವ ಸಂದರ್ಭದಲ್ಲಿ ತಮ್ಮದೇ ಕಾರ್ಯಶೈಲಿಯಲ್ಲಿ ನಾಡಿನ ಹೆಸರಾಂತ ಉಪನ್ಯಾಸಕರನ್ನು ಆಹ್ವಾನಿಸಿ ಕೋರ್ಸ್  ಸತತ 15 ವರ್ಷಗಳ ಕಾಲ ಪೋಷಿಸಲಾಯಿತು ಎಂದು ನೆನೆದರು.

ಗಣಕಶಾಸ್ತ್ರ ಶಿಕ್ಷಣವನ್ನು ವಿದ್ಯಾರ್ಥಿಗಳ ನೆಚ್ಚಿನ ವಿಷಯವನ್ನಾಗಿಸಲು ಮತ್ತು ಸ್ಪರ್ಧಾತ್ಮಕ  ಜಗದಲ್ಲಿ ರಾಜ್ಯದ ವಿದ್ಯಾರ್ಥಿಗಳನ್ನು  ಅಂತರಾಷ್ಟ್ರೀಯ ಮಟ್ಟದಲ್ಲಿ ಸಿದ್ದಪಡಿಸಲು 80-90ರ ದಶಕದಲ್ಲಿ ಪಟ್ಟ ಪ್ರಯತ್ನಗಳು ಇಂದು ರಾಜ್ಯವನ್ನು ಐಟಿ ಹಬ್ ಆಗಿ ಪರಿವರ್ತಿಸಿವೆ  ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿಯ ಗಣಕ ವಿಜ್ಞಾನ ವಿಭಾಗದ ಪ್ರೊ. ಪಿ ಎಸ್ ಹಿರೇಮಠ್ ಹೇಳಿದರು.

ಉತ್ತರ ಕರ್ನಾಟಕ  ಭಾಗದಲ್ಲಿ ಕಂಪ್ಯೂಟರ್ ವಿಜ್ಞಾನ ಶಿಕ್ಷಣವನ್ನು 80 ರ ದಶಕದಲ್ಲಿ ಪರಿಚಯಿಸಿ ವಿದ್ಯಾರ್ಥಿಗಳ  ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೇಯ ಪ್ರೊ. ಎನ್ ಎಂ ಬುಜುರ್ಕೆ ಅವರಿಗೆ ಸಲ್ಲಬೇಕು. ಇವರೊಂದಿಗಿನ ನಂಟು 90ರ ದಶಕದಿಂದ ಆರಂಭವಾಗಿ ಇಂದಿಗೂ ಮುಂದುವರೆದಿದೆ ಎಂದು ವಿಶ್ರೀಕೃವಿವಿ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಅವರು ಹೇಳಿದರು.

ಹಿರಿಯರಾದ ಪ್ರೊ. ಬುಜುರ್ಕೆ ಹಾಗೂ ಪ್ರೊ. ಹಿರೇಮಠ್ ಅವರೊಂದಿಗಿನ ಒಡನಾಟವನ್ನು, ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಕುರಿತು ಅವರಿಗಿದ್ದ ಅರ್ಪಣಾ ಭಾವವನ್ನು ಕೆಲವು ಉದಾಹರಣೆಗಳೊಂದಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಾಗಿದ್ದ ಮುಖ್ಯ ಅತಿಥಿಗಳಿಬ್ಬರಿಗೂ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಶಶಿಕಾಂತ್ ಉಡಿಕೇರಿ, ವಿತ್ತಾಧಿಕಾರಿಗಳಾದ ಡಾ. ಕೆ ಸಿ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

ವಿವಿಧ ನಿಖಾಯಗಳ ಡೀನರು, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ ವಿ ಪ್ರಸಾದ್, ಪ್ರೊ. ವಿ ಲೋಕೇಶ್, ಐಕ್ಯೂಎಸಿ ನಿರ್ದೇಶಕರಾದ  ಪ್ರೊ. ಜೆ. ತಿಪ್ಪೇರುದ್ರಪ್ಪ,    ಡಾ. ಹನುಮೇಶ ವೈದ್ಯ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು  ಹಾಜರಿದ್ದರು.