ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕೆ ಸಾರಿಗೆ ಇಲಾಖೆಯಿಂದ ಕಿರುಕುಳ-ವಿಷ ಕುಡಿಯಲು ಮುಂದಾದ ಸಾರಿಗೆ ಸಿಬ್ಬಂದಿ

Share

ರಾಯಚೂರು, ಜೂನ 29: ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದ್ದಕ್ಕೆ ಸಾರಿಗೆ ಇಲಾಖೆ ಅನಗತ್ಯವಾಗಿ ಕಿರುಕುಳ ನೀಡುತ್ತಿದೆ ಎಂದು ಸಾರಿಗೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಎನ್​​ಇಕೆಆರ್​​ಟಿಸಿ ಡಿವಿಷನಲ್ ಕಚೇರಿ ಎದುರು ನಡೆದಿದೆ.

ಸೈಯದ್ ಯೂನಸ್ ಆತ್ಮಹತ್ಯೆಗೆ ಯತ್ನಿಸಿದ ಚಾಲಕ. ಮುಷ್ಕರದಲ್ಲಿ‌ ಪಾಲ್ಗೊಂಡಿದ್ದಕ್ಕಾಗಿ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸೈಯದ್ ವಿಷ ಸೇವಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇತರೆ ಸಿಬ್ಬಂದಿ ಅವರ ಬಳಿ ಇದ್ದ ಕ್ರಿಮಿನಾಶಕವನ್ನು ಕಿತ್ತೆಸೆದು ಆತ್ಮಹತ್ಯೆ ತಡೆದಿದ್ದಾರೆ.

ಸೈಯದ್ ಅವರನ್ನು ಬೀದರ್ ಜಿಲ್ಲೆಯ ಬಾಲ್ಕಿಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ವರ್ಗಾವಣೆ ವಿಚಾರಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೈಯದ್ ಮಾತ್ರವದೇ ಮುಷ್ಕರದಲ್ಲಿ ಭಾಗಿಯಾಗಿದ್ದ ಹಲವು ಸಿಬ್ಬಂದಿ ಕಳೆದ ಒಂದು ವಾರದಿಂದ ಇಲಾಖೆಯ ಕಚೇರಿಗೆ ಅಲೆಯುತ್ತಿದ್ದು, ಕೆಲಸಕ್ಕೆ ಆರ್​​​ಟಿಪಿಸಿಆರ್ ವರದಿ ಕಡ್ಡಾಯ ಮಾಡಿದ ನೆಪದಲ್ಲೂ ಸುಖಾಸುಮ್ಮನೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಧ್ವನಿ ಎತ್ತಿದವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗುತ್ತಿದೆ. ವರ್ಗಾವಣೆ, ವೇತನ ತಡೆ ಸೇರಿದಂತೆ ಮೇಲಾಧಿಕಾರಿಗಳು ವಿವಿಧ ರೂಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಮೂರು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಸಿಬ್ಬಂದಿಯ ಆರೋಪಗಳನ್ನು ಎನ್​​ಇಕೆಆರ್​​ಟಿಸಿ ಡಿ.ಸಿ ವೆಂಕಟೇಶ್​ ನಿರಾಕರಿಸಿದ್ದು, ಈ ರೀತಿಯ ಯಾವುದೇ ಕಿರುಕುಳ ಇಲ್ಲ ಎಂದಿದ್ದಾರೆ.