ಕೊರೊನಾಗೆ ಬಲಿಯಾದ ರೈತರ ಸಾಲ ಮನ್ನಾಗೆ ಮುಂದಾದ ಅಪೆಕ್ಸ್ ಬ್ಯಾಂಕ್‌

Share

ಮೈಸೂರು, ಜುಲೈ 4: ಮಾರಕ ಕೊರೊನಾ ವೈರಸ್​​​ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದೆ. ಯಾವುದೇ ಆದಾಯವಿಲ್ಲದೇ ಕೂಲಿಕಾರ್ಮಿಕ ರೈತರು ಪರದಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಎರಡನೇ ಅಲೆ ಬಂದಾಗಂತೂ ಸಾವಿರಾರು ರೈತರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ಕೋವಿಡ್​ನಿಂದ ಸಾವನ್ನಪ್ಪಿದ ರೈತರ ಸಾಲ ಮನ್ನಾ ಮಾಡುವುದಾಗಿ ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಟಿ ಹರೀಶ್‌ಗೌಡ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತಾಡಿದ ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ ಜಿ.ಟಿ ಹರೀಶ್‌ಗೌಡ, ಕೊರೊನಾದಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡಲಿದ್ದೇವೆ. ಈ ಕುರಿತು ಅಪೆಕ್ಸ್ ಬ್ಯಾಂಕ್‌ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಆಗುತ್ತೆ ಎಂದರು.

ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಂದ 13 ಸಾವಿರ ಕೋಟಿ ಬೆಳೆ‌ ಸಾಲ‌ ನೀಡಲಾಗಿದೆ‌. ಮಹಾಮಾರಿ ಕೊರೊನಾ ಗ್ರಾಮೀಣ ಭಾಗಕ್ಕೂ ಆವರಿಸಿ ಸಾವು ನೋವು ಆಗಿದೆ. ಕೊಒನಾಗೆ ಬಲಿಯಾದ ರೈತ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಹೀಗಾಗಿ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲಾಗಿದೆ ಎಂದರು.

ಮೈಸೂರು ಚಾಮರಾಜನಗರ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ 280 ಮಂದಿ ರೈತರು ಮೃತಪಟ್ಟಿದ್ದಾರೆ. 280 ರೈತರ 2.10 ಕೋಟಿ ರೂ. ಸಾಲ ಮನ್ನಾ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಜಿ.ಟಿ ಹರೀಶ್‌ಗೌಡ ಭರವಸೆ ನೀಡಿದ್ದಾರೆ.