ಜುಲೈ 19 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಸಾಧ್ಯತೆ

Share

ನವದೆಹಲಿ, ಜೂ.29: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನ ಈ ವರ್ಷ ಜುಲೈ 19 ರಿಂದ ಆಗಸ್ಟ್ 13 ರವರೆಗೆ ನಡೆಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ.

ಅಧಿವೇಶನದ ದಿನಾಂಕಗಳನ್ನು ರೂಪಿಸಲು ಸಿಸಿಪಿಎ ಕಳೆದ ವಾರ ಸಭೆ ಸೇರಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯ ಅಂತಿಮ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಅಧಿವೇಶನದಲ್ಲಿ ಕೆಲವು ಸುಗ್ರೀವಾಜ್ಞೆಗಳನ್ನು ಅಂಗೀಕರಿಸುವುದು ಸೇರಿದಂತೆ ಹಲವಾರು ಮಸೂದೆಗಳನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆಯಿದೆ.

ಒಟ್ಟು 20 ದಿನಗಳ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್‌ ನಿರ್ವಹಣೆ, ಲಸಿಕೆ ಕೊರತೆ, ಆಮ್ಲಜನಕ ಕೊರತೆ ವಿಚಾರವನ್ನು ವಿಪಕ್ಷಗಳು ಚರ್ಚೆಗೆ ತರುವ ಸಾಧ್ಯತೆ ಅಧಿಕವಾಗಿದೆ. ಹಾಗೆಯೇ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯ ಮಾಡಲಿದೆ.

ಮಾಧ್ಯಮಗಳು ಸೇರಿದಂತೆ ಸಂಸತ್ತಿಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರ ಇರಬೇಕೋ ಬೇಡವೋ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ಅಧಿವೇಶನವು ಕೆಳ ಮನೆ, ಮೇಲ್ಪನೆಯಲ್ಲಿ ಏಕಕಾಲಕ್ಕೆ ನಡೆಯಬಹುದೇ? ತಲಾ ನಾಲ್ಕು ಗಂಟೆಗಳ ಕಾಲ ಅಧಿವೇಶನ ನಡೆಯಬಹುದೇ? ಎಂಬುದು ಇನ್ನೂ ತಿಳಿದು ಬಂದಿಲ್ಲ.