‘ಗಂಗೂಬಾಯಿ ಕಾಥಿಯಾವಾಡಿ’ ರಿಲೀಸ್​ಗೆ ಸಿಕ್ತು ಗ್ರೀನ್​ ಸಿಗ್ನಲ್​

Share

ನವದೆಹಲಿ,ಫೆಬ್ರವರಿ 23: ವಿವಾದಗಳನ್ನು ಸುತ್ತಿಕೊಂಡಿದ್ದ ಬಾಲಿವುಡ್​ನ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ವಿರುದ್ಧ ಸಲ್ಲಿಸಿದ್ದ ಕೆಲ ಅರ್ಜಿಗಳನ್ನು ಬಾಂಬೆ ಹೈಕೋರ್ಟ್​ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡೇ ದಿನಗಳಲ್ಲಿ ರಿಲೀಸ್​ ಆಗಬೇಕಿದ್ದ ಚಿತ್ರಕ್ಕೆ ಇದ್ದ ಕಾನೂನು ತಡೆಯಿಂದ ಮುಕ್ತಿ ಸಿಕ್ಕಿದ್ದು, ಸಿನಿಮಾ ಬಿಡುಗಡೆಗೆ ಮುಂದಾಗಿದೆ.

ಇದೇ 25ರಂದು ರಿಲೀಸ್​ ಆಗಲಿರುವ ಈ ಸಿನಿಮಾದ ವಿರುದ್ಧ ರೆಡ್​ಲೈಟ್​ ಏರಿಯಾ ಎಂದೇ ಖ್ಯಾತವಾಗಿರುವ ಕಾಮಾಟಿಪುರ ಮತ್ತು ಕಾಥಿಯಾವಾಡಿಯ ಜನರು, ಗಂಗೂಬಾಯಿಯ ದತ್ತು ಮಗ ಹಾಗೂ ಕಾಂಗ್ರೆಸ್​ ಶಾಸಕ ಕೋರ್ಟ್​ ಮೊರೆ ಹೋಗಿದ್ದರು.

ಜನಾಂಗೀಯ ನಿಂದನೆ ಸೇರಿ ಸಾಕಷ್ಟು ಆರೋಪಗಳು ಈ ಸಿನಿಮಾದ ಮೇಲಿದೆ. ಕಾಮಾಟಿಪುರ ಮತ್ತು ಕಾಥಿಯಾವಾಡಿಯದ ಬಗ್ಗೆ ಈ ಸಿನಿಮಾದಲ್ಲಿ ಹೆಸರು ಉಲ್ಲೇಖವಾಗಿದ್ದು, ಇದರಿಂದ ಈ ಪ್ರದೇಶಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ, ಆ ಹೆಸರುಗಳನ್ನು ತೆಗೆದುಹಾಕುವಂತೆ ಕೋರ್ಟ್​ನಲ್ಲಿ ಕೋರಲಾಗಿತ್ತು.

ಸಿನಿಮಾ ಬಿಡುಗಡೆ ಆದರೆ ಕಾಮಾಟಿಪುರದ ನಿವಾಸಿಗಳ ಬಗ್ಗೆ ಸಾರ್ವಜನಿಕರು ಕೆಟ್ಟದಾಗಿ ಯೋಚಿಸಲಿದ್ದಾರೆ. ಇಲ್ಲಿನ ನಿವಾಸಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಲಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಇಲ್ಲವಾದರೆ ಸಿನಿಮಾದಲ್ಲಿನ ಕಾಮಾಟಿಪುರ ಹೆಸರನ್ನು ತೆಗೆಯಬೇಕು ಎಂದು ಸ್ಥಳೀಯ ಶಾಸಕ ಅಮೀನ್​ ಕೋರಿದ್ದರು.

ಆದರೆ ಈ ವಾದಗಳನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಅರ್ಜಿದಾರರು ಕೋರ್ಟ್​ಗೆ ಬರುವ ಮುನ್ನ ಪರ್ಯಾಯ ಮಾರ್ಗಗಳ ಬಗ್ಗೆ ಏನನ್ನೂ ಅರ್ಜಿಯಲ್ಲಿ ತಿಳಿಸಲಿಲ್ಲ. ಒಂದು ವೇಳೆ ಯಾರಿಗಾದರೂ ಮಾನಸಿಕವಾಗಿ ತೊಂದರೆ ಆಗುವುದಿದ್ದರೆ ಸೂಕ್ತ ವೇದಿಕೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದೆ.