ಆಡೂರಿನ 21 ವರದಿಗಳು ನೆಗೆಟಿವ್

(ಸಾಂದರ್ಭಿಕ ಚಿತ್ರ)

Share

ಹಾವೇರಿ: ಹಾನಗಲ್ ತಾಲ್ಲೂಕಿನ ಆಡೂರು ಗ್ರಾಮದ 21 ಪ್ರಕರಣಗಳು ಸೇರಿದಂತೆ ಒಟ್ಟು 110 ಪ್ರಕರಣಗಳ ವರದಿ ಮಂಗಳವಾರ ಬಂದಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ.

ವಿಜಯಪುರದ ಇಬ್ಬರು ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಆಡೂರಿನ ಒಟ್ಟು 22 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. 21 ವರದಿಗಳು ನೆಗೆಟಿವ್ ಎಂದು ಘೋಷಣೆ ಮಾಡಲಾಗಿದೆ.

ಅಧಿಕೃತ ಮಾಹಿತಿ

‘ಮಂಗಳವಾರ 94 ವ್ಯಕ್ತಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 645 ಮಾದರಿಗಳನ್ನು ಕಳುಹಿಸಿದ್ದು, ಅವುಗಳಲ್ಲಿ 456 ನೆಗೆಟಿವ್‌ ಆಗಿವೆ. 189 ಪ್ರಕರಣಗಳ ವರದಿ ಬರುವುದು ಬಾಕಿ ಇದೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣ ದೃಢಪಟ್ಟಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

‘599 ಮಂದಿಯ ಮೇಲೆ ನಿಗಾ ಇಟ್ಟಿದ್ದು, 209 ಮಂದಿ 28 ದಿನಗಳನ್ನು ಪೂರೈಸಿದ್ದಾರೆ. 10 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 27 ಮಂದಿ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.