ಹಾವೇರಿ: ಮೇ 19 ರಿಂದ ಅಂತರ್ ಜಿಲ್ಲಾ ಬಸ್ ಓಡಾಟ ಆರಂಭ

Share

ಹಾವೇರಿ: ಜಿಲ್ಲೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮೇ 19 ರಿಂದ ಬಸ್ ಸಂಚಾರ ಆರಂಭಗೊಳಿಸಲಾಗುವುದು ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಜಿಲ್ಲಾ ನಿಯಂತ್ರಣಾಧಿಕಾರಿ ಜಗದೀಶ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಬಸ್ ಡಿಪೋಗಳಿಂದ ವಿವಿಧ ಜಿಲ್ಲೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಬಸ್ ಓಡಾಟ ಆರಂಭಿಸಲಾಗುವುದು ಎಂದರು.

ಈಗಾಗಲೇ ಹಾವೇರಿ ಜಿಲ್ಲೆಯೊಳಗೆ 60 ರಿಂದ 70 ಬಸ್‍ಗಳು ನಿತ್ಯ ಓಡಾಟ ಆರಂಭಿಸಿವೆ. ಹೊರ ಜಿಲ್ಲೆಗಳಿಗೆ ಅಂದಾಜು 200 ಬಸ್‍ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಹಾಯಕ ನಿಯಂತ್ರಣಾಧಿಕಾರಿ ಮುಜಂದಾರ ಅವರು ಮಾಹಿತಿ ನೀಡಿ, ಜಿಲ್ಲೆಯ ಎಲ್ಲ ಡಿಪೋಗಳಿಂದ ಮೇ 19 ರಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ. ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಗದಗ, ಶಿರಸಿ, ಕಾರವಾರ, ಧಾರವಾಡ ಸೇರಿದಂತೆ ದೂರದ ಬೆಂಗಳೂರು, ಮೈಸೂರಿಗೂ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದರು.

ಸರ್ಕಾರದ ಮಾರ್ಗಸೂಚಿಯಂತೆ ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶ. ಬಸ್ಸಿನೊಳಗೆ ಜನರು ಕುಳಿತುಕೊಳ್ಳಬೇಕಾದ ಸ್ಥಳವನ್ನು ನಿಗಧಿಪಡಿಸಿ ಮಾರ್ಕಿಂಗ್ ಮಾಡಲಾಗಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಬಸ್ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ.