ಸಮೃದ್ಧಿ ಯೋಜನೆ- ಧನಸಹಾಯ ಪಡೆಯಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Share

ಹಾವೇರಿ: ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪರದೇಶದ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ “ಸಮೃದ್ಧಿ” ಯೋಜನೆಯಡಿ ಪ್ರೋತ್ಸಾಹಧನ ಒದಗಿಸಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಬೀದಿಬದಿ ಮಹಿಳಾ ವ್ಯಾಪಾರಿಗಳು ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆಯುವುದನ್ನು ತಡೆಗಟ್ಟಲು ಶೋಷಣೆಯಿಂದ ಮುಕ್ತಗೊಳಿಸುವುದು, ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ತಲಾ ರೂ.10,000 ಗಳಂತೆ ಪ್ರೋತ್ಸಾಹಧನ ನೀಡಲಾಗುವುದು.

ಅಭ್ಯರ್ಥಿಯು 18 ರಿಂದ 60 ವರ್ಷದೊಳಗಿರಬೇಕು, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ, ಪೌರಾಡಳಿತ ಇಲಾಖೆಯಲ್ಲಿ ಮತ್ತು ಬೆಂಗಳೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಬೃಹತ್ ಮಹಾನಗರ ಪಾಲಿಕೆಯಲ್ಲಿ ಬೀದಿಬದಿ ವ್ಯಾಪಾರಿ ಎಂದು ನೋಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಓಗಳಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು.


ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್‍ಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್‍ಬುಕ್ ಕಡ್ಡಾಯವಾಗಿ ಹೊಂದಿರಬೇಕು. ಒಬ್ಬ ಅಭ್ಯರ್ಥಿಯು ಕೇವಲ ಒಂದು ಬಾರಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ.


ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ದಿನಾಂಕ 08-08-2019ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಗಿತಿಗಾಗಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾವೇರಿ ಕಚೇರಿಯನ್ನು ಕೆಲಸದ ಸಮಯದಲ್ಲಿ ಸಂಪರ್ಕಿಸಬಹುದು.