ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯ ಶಾಲೆಗೆ ಪ್ರವೇಶ ನೀಡುವ ಸಂಪ್ರದಾಯ ಬಂದ್?

Share

ಬೆಂಗಳೂರು, ಏಪ್ರಿಲ್ 15: ಕೇಂದ್ರೀಯ ವಿದ್ಯಾಲಯದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಂಸದರ ಕೋಟಾದಡಿ ಪ್ರವೇಶ ನೀಡಲಾಗುತ್ತಿತ್ತು. ಇದರ ಜತೆಗೆ ಇನ್ನಿತರ ನಿಬಂಧನೆ ಅಡಿಯಲ್ಲೂ ದಾಖಲಾತಿ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನ 2022-23 ನೇ ಸಾಲಿನಲ್ಲಿ ಸಂಸದರ ಕೋಟಾ ಸೇರಿದಂತೆ ವಿಶೇಷ ನಿಬಂಧನೆ ಅಡಿ ನೀಡುತ್ತಿದ್ದ ಪ್ರವೇಶವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ. ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಕೇಂದ್ರೀಯ ವಿದ್ಯಲಯಗಳಿಗೆ ಸಂಸದರ ಕೋಟಾ ಸೇರಿದಂತೆ ವಿಶೇಷ ನಿಬಂಧನೆ ಅಡಿಯಲ್ಲಿ ನೀಡುತ್ತಿದ್ದ ಪ್ರವೇಶಾತಿಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಜತೆಗೆ ಸಂಸದರ ಕೋಟಾದಡಿ ನೀಟುವ ಸೀಟುಗಳನ್ನು ರದ್ದುಗೊಳಿಸಬೇಕೋ ಅಥವಾ ಮುಂದುವರೆಸಬೇಕೋ ಎಂಬುದರ ಬಗ್ಗೆ ಗಂಭಿರ ಚಿಂತನೆ ನಡೆದಿದೆ.

ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯಗಳಿಗೆ ನೀಡುವ ಪ್ರವೇಶವನ್ನು ಮುಂದುವರೆಸುವ ಬಗ್ಗೆ ಸಂಸದರ ಜತೆ ಚರ್ಚೆ ನಡೆಸಲಾಗುವುದು ಕೇಂದ್ರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಸಂಸದರ ಕೋಟಾದಡಿ ಯಾವುದೇ ದಾಖಲಾತಿ ನೀಡುತ್ತಿಲ್ಲ.

ಕೇಂದ್ರೀಯ ವಿದ್ಯಾಲಯ ಎಂಬುದು ಸ್ವತಂತ್ರ್ ಸಂಸ್ಥೆ. ದೇಶದಾದ್ಯಂತ ಈ ಸಂಸ್ಥೆಯ ನೂರಾರು ಶಾಲೆಗಳಿವೆ. ಅವೆಲ್ಲವೂ ಕೇಂದ್ರ ಶಿಕ್ಷಣ ಇಲಾಖೆ ಅಡಿ ಬರುತ್ತವೆ. ಪ್ರಸಕ್ತ ಸಾಲಿನಲ್ಲಿ ಸದ್ಯದ ಮಟ್ಟಿಗೆ ಸಂಸದರ ಕೋಟಾದಡಿ ಪ್ರವೇಶ ನೀಡದಂತೆ ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೂ ವಿಶೇಷ ನಿಬಂಧನೆಗಳ ಅಡಿ ಪ್ರವೇಶ ಮಾಡುವಂತಿಲ್ಲ. ಈ ಬಗ್ಗೆ ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಧಾನ ಕಚೇರಿಯಲ್ಲಿ ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿಶೇಷ ನಿಬಂಧನೆ ಅಡಿ ಕೆವಿ ಸೀಟು ಹಂಚಿಕೆ ಪಟ್ಟಿ ದೊಡ್ಡದಾಗಿದೆ. ಹೀಗಾಗಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ 2021-22 ನೇ ಸಾಲಿನಲ್ಲಿ ಒಟ್ಟು 21 ವಿಶೇಷ ನಿಬಂಧನೆಗಳ ಅಡಿಯಲ್ಲಿ 1,75,261 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಅದರಲ್ಲೂ ಸಂಸದರ ಕೋಟಾದಡಿ 7,301 ಸೀಟು ನೀಡಲಾಗಿದೆ. ಈ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.