ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಬಿಎಸ್‌ ವೈ ಪ್ರಮಾಣವಚನ ಸ್ವೀಕಾರ

Share

ಬೆಂಗಳೂರು: ಸರಕಾರ ರಚಿಸುವುದಕ್ಕೆ ಬಿಜೆಪಿ ಹೈಕಮಾಂಡ್‌ನಿಂದ ಅನುಮತಿ ಪಡೆದಿರುವ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ಸಂಜೆ 6 ರಿಂದ 6.15ರ ಒಳಗೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಒಂದೇ ವಾರದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದು, ಮುಂದಿನ ಶುಕ್ರವಾರದ ಒಳಗೆ ಬಿಎಸ್ ವೈ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಬೇಕಾಗುತ್ತದೆ.

ರಾಜಭವನದಲ್ಲಿ ಸರಳ ರೀತಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅವರೊಂದಿಗೆ ಬೇರೆ ಯಾವ ಶಾಸಕರೂ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿಲ್ಲ. ಸದ್ಯಕ್ಕೆ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ಮಾತ್ರ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ.

‘ರಾಜ್ಯಪಾಲರನ್ನು ಭೇಟಿ ಮಾಡಿ ಸಂಜೆ 6 ರಿಂದ 6.15 ಒಳಗೆ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ಕೋರಿದ್ದೇನೆ. ಅದಕ್ಕೆ ರಾಜ್ಯಪಾಲರು ಸಹಮತ ವ್ಯಕ್ತಪಡಿಸಿ ಪತ್ರ ನೀಡಿದ್ದಾರೆ’ ಎಂದು ಯಡಿಯೂರಪ್ಪ ರಾಜ್ಯಪಾಲರ ಭೇಟಿ ಬಳಿಕ ತಿಳಿಸಿದ್ದಾರೆ.

ಮಂತ್ರಿಮಂಡಲಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಜತೆ ಚರ್ಚಿಸಿ ಕೇಂದ್ರದ ನಾಯಕರಿಂದ ಸೂಚನೆಗಳನ್ನು ಪಡೆದುಕೊಂಡ ಬಳಿಕವಷ್ಟೇ ಸಂಪುಟ ವಿಸ್ತರಣೆಗೆ ಅನುಮತಿ ಸಿಗಲಿದೆ. ಹೀಗಾಗಿ ಅವರು ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.