ಪರಿಶಿಷ್ಟ ಕಾಲೋನಿಗಳಲ್ಲಿ ಗ್ರಂಥಾಲಯ ಸ್ಥಾಪನೆ, ವಿದ್ಯುತ್ ದೀಪ ಅಳವಡಿಕೆ, ತ್ವರಿತ ಸೌಲಭ್ಯ ವಿತರಣೆಗೆ ಸೂಚನೆ

Share

ಹಾವೇರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಾಲೋನಿಗಳಲ್ಲಿ ಗ್ರಾಂಥಾಲಯ ಸ್ಥಾಪನೆ, ವಿದ್ಯುತ್ ದೀಪ ಅಳವಡಿಕೆ, ಪೌರ ಕಾರ್ಮಿಕರಿಗೆ ಸೈಕಲ್ ಹಾಗೂ ಟೈಲರಿಂಗ್ ಯಂತ್ರ ವಿತರಣೆ ಸೇರಿದಂತೆ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶಿಷ್ಟರ ಕುಂದುಕೊರತೆಗಳ ನಿವಾರಣೆ ಹಾಗೂ ಸೌಲಭ್ಯಗಳ ವಿತರಣೆಯ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಿದರು.

ನಗರದಲ್ಲಿ ಕಳೆದ ಎರಡು ವರ್ಷದಿಂದ ನಿರ್ಮಾಣಗೊಳ್ಳುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಮಿತಿಯ ಅಧಿಕಾರೇತರ ಸದಸ್ಯೆ ಎನ್.ಕೆ.ಮರೋಳ ಅವರು ಸಭೆಯ ಗಮನಕ್ಕೆ ತಂದರು. ಈ ಕುರಿತಂತೆ ಒಂದು ಕೋಟಿ ರೂ.ಅನುದಾನ ಬಿಡುಗಡೆಯಾಗಬೇಕಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.

ನೆಗಳೂರ ಸ್ಮಶಾನ ಭೂಮಿ ಅತಿಕ್ರಮಣ ತೆರವು, ಅಭಿವೃದ್ಧಿ ಹಾಗೂ ಇಚಲಯಲ್ಲಾಪೂರ ಸ್ಮಶಾನ ಅಭಿವೃದ್ಧಿ ಕೆಲಸವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಸವಣೂರ ಪುರಸಭೆ ವ್ಯಾಪ್ತಿಯಲ್ಲಿ ವಸತಿ ನಿಲಯಕ್ಕೆ ಕಾಯ್ದಿರಿಸಿದ ಜಮೀನು ಕಡಿಮೆ ಇರುವುದರಿಂದ ಪರ್ಯಾಯ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಪುರಸಭೆ ಅಧಿಕಾರಿಗೆ ಸೂಚನೆ ನೀಡಿದರು.

ಹಿರೇಕೆರೂರು ತಾಲೂಕು ಲಿಂಗಾಪುರ ಹಾಗೂ ಹಾನಗಲ್ ತಾಲೂಕು ಜಾನಗುಂಡಿಕೊಪ್ಪ ತಾಂಡಾವನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಲು ಸದಸ್ಯರು ಮನವಿ ಸಲ್ಲಿಸಿದರು. ಜನಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರ ನಿಯಮಾವಳಿಯಂತೆ ಸದರಿ ಗ್ರಾಮಗಳು ಕಂದಾಯ ಗ್ರಾಮಗಳಾಗಿ ಘೋಷಿಸಲು ಸಾಧ್ಯವಾಗಿಲ್ಲ. ಪುನರ್ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾದ ಶೇ.24.10ರ ಅನುದಾನದಡಿ ರಾಣೇಬೆನ್ನೂರ ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ಯಂತ್ರಚಾಲಿತ ಟೈಲರಿಂಗ್ ಮಷಿನ್, ಸೈಕಲ್ ಹಾಗೂ ಲ್ಯಾಪ್‍ಟಾಪ್ ವಿತರಣೆಗೆ ಕ್ರಮವಹಿಸಲು ಸೂಚನೆ ನೀಡಿದರು. ಹಾಗೂ ಗ್ರಾಮ ಪಂಚಾಯತಿಯ ಎಸ್.ಸಿ. ಎಸ್.ಟಿ. ಮೀಸಲಿನ ಶೇ.25ರ ಅನುದಾನದಲ್ಲಿ ಆ ವರ್ಗದ ಜನರ ಮನೆಗಳ ದುರಸ್ಥಿಗೆ ಕ್ರಮವಹಿಸುವಂತೆ ಎಲ್ಲ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಡಗಿಯ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ 15ದಿನದೊಳಗೆ ಗ್ರಂಥಾಲಯ ಆರಂಭಿಸಲು ಸೂಚನೆ ನೀಡಿದರು. ಹಿರೇಬೆಂಡಿಗೇರಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗೆ ಹೈಮಾಸ್ಕ್ ಬೀದಿ ದೀಪ ಅಳವಡಿಸಲು ಸೂಚನೆ ನೀಡಿದರು. ರಾಣೇಬೆನ್ನೂರ ತಾಲೂಕಿನ ನಾಗೇನಹಳ್ಳಿ ಗ್ರಾಮದ ಪರಿಶಿಷ್ಟ ವರ್ಗದ ಫಲಾನುಭವಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಿಸಿಕೊಂಡಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಲು ಬೇರೆ ಜಮೀನುಗಳಲ್ಲಿ ಪೋಲ್ಸ್ ಹಾಕದಂತೆ ಅಡ್ಡಿ ಪಡಿಸುತ್ತಿರುವ ಪ್ರಕರಣಗಳ ಕುರಿತಂತೆ ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ವಿವಿಧ ಯೋಜನೆಗಳ ಅರಿವು ಮೂಡಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದೌರ್ಜನ್ಯ ಪ್ರಕರಣಗಳ ಪೈಕಿ 2017ರಲ್ಲಿ 47 ಪ್ರಕರಣಗಳಲ್ಲಿ 70.65 ಲಕ್ಷ ರೂ., 2018 ರಲ್ಲಿ 29 ಪ್ರಕರಣಗಳಲ್ಲಿ 45.75 ಲಕ್ಷ ರೂ ಹಾಗೂ 2019ರ ಈವರೆಗೆ ಐದು ಪ್ರಕರಣಗಳಲ್ಲಿ 5.50 ಲಕ್ಷ ರೂ. ಪರಿಹಾರ ಹಣ ಪಾವತಿಸಲಾಗಿದೆ. ಆರ್.ಟಿ.ಜಿ.ಎಸ್. ಮೂಲಕ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾಲೋನಿಯಲ್ಲಿ ಗ್ರಂಥಾಲಯಗಳ ಸ್ಥಾಪನೆ ಹಾಗೂ ಅಗತ್ಯವಿದ್ದೆಡೆ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಸದಸ್ಯರು ಮನವಿ ಮಾಡಿಕೊಂಡರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಾರಿ ಅಭಿಯೋಜಕ ಸಿದ್ಧಾರೂಡ ಗೆಜ್ಜಿಹಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಪೌರಾಯುಕ್ತ ಬಸವರಾಜ ಜಿದ್ದಿ, ಡಾ.ಮಹಾಂತೇಶ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಅಧಿಕಾರೇತರ ಸದಸ್ಯರು ಉಪಸ್ಥಿತರಿದ್ದರು.