ಚೆಕ್ ಪೋಸ್ಟ್‍ಗಳಲ್ಲಿ ನಕಲಿ ಪಾಸ್, ಅವಧಿ ಮೀರಿದ ಪಾಸ್‍ಗಳ ತಡೆಗೆ ಕ್ರಮ: ಉಪ ವಿಭಾಗಾಧಿಕಾರಿ ಡಾ. ದಿಲೀಷ್ ಶಶಿ

Share

ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಚೆಕ್‍ಪೋಸ್ಟ್‍ಗಳಲ್ಲಿ ಸಂಚರಿಸುವ ಪ್ರತಿ ವಾಹನಗಳ ಮೇಲೆ ತೀವ್ರನಿಗಾವಹಿಸಬೇಕು. ಕೆಲವರು ನಕಲಿ ಪಾಸ್ ಹಾಗೂ ಅವಧಿ ಮೀರಿದ ಪಾಸ್‍ಗಳನ್ನು ಬಳಸಿಕೊಂಡು ಸಂಚರಿಸುವುದು ಪತ್ತೆಯಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ವಾಹನಗಳನ್ನು ವಶಕ್ಕೆ ಪಡೆಯುವಂತೆ ತಹಶೀಲ್ದಾರಗಳಿಗೆ ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಅವರು ಸೂಚನೆ ನೀಡಿದ್ದಾರೆ.

ಚೆಕ್‍ಪೋಸ್ಟ್‍ಗಳಲ್ಲಿ ಪ್ರತಿ ವಾಹನಗಳ ಪಾಸ್‍ಗಳನ್ನು ಪರಿಶೀಲಿಸಬೇಕು ಹಾಗೂ ಒಂದೊಮ್ಮೆ ಸುಳ್ಳು ದಾಖಲಾತಿ ನೀಡಿ ಪಾಸು ಹೊಂದಿದ್ದರೆ ಅಂತಹ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳಬೇಕು. ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದ್ದು, ಅನುಮತಿ ನೀಡಲಾದ ಸರಕು ಸಾಗಾಣಿಕೆ ವಾಹನಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಾಗಾಣಿಕೆ ಮಾಡಿದಲ್ಲಿ ವಾಹನ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದಾರೆ ಹಾಗೂ ಪಾಸ್ ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಪಾಸ್ ಅವಧಿ ಮುಕ್ತಾಯಗೊಂಡ ವಾನಗಳ ಸಂಚಾರ ಕಟ್ಟುನಿಟ್ಟಾಗಿ ನಿರ್ಭಂಧಿಸಬೇಕು. ಚೆಕ್‍ಪೋಸ್ಟ್ ಮೂಲಕ ಸಂಚರಿಸುವ ಪ್ರತಿಯೊಂದು ವಾಹನ ಹಾಗೂ ಪ್ರತಿ ವ್ಯಕ್ತಿಯ ಆರೋಗ್ಯ ತಪಾಸಣೆಕೈಗೊಳ್ಳಬೇಕು. ವಿನಾಕಾರಣ ಸಂಚರಿಸುವ ವಾಹನ ಹಾಗೂ ಸಾರ್ವಜಕರ ಸಂಚಾರವನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.