ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ಪರಿಹರಿಸಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ

Share

ಹಾವೇರಿ: ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕೆಲಸಮಾಡಿ, ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಬರಪೀಡಿತ ಆಯ್ದ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಉದ್ಯೋಗ ಖಾತ್ರಿ ಹಾಗೂ ಬರಪರಿಹಾರ ಕಾರ್ಯಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಉದಾರವಾಗಿರಬೇಕು. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಗ್ರಾಮದ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಬೇಕು. ಗ್ರಾಮದಿಂದ ಕೊಳವೆಬಾವಿ ಪಾಯಿಂಟ್ ದೂರವಿದ್ದರೆ ಪೈಪ್‍ಲೈನ್ ಅಳವಡಿಸುವತನಕ ಟ್ಯಾಂಕರ್ ಬಳಸಿ ನೀರು ಪೂರೈಸಿ ಎಂದು ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.

ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 31 ಕೊಳವೆ ಬಾವಿಗಳನ್ನು ಕೊರೆಸಲು ವಿಳಂಬ ಮಾಡಿದ ಅಧಿಕಾರಿಗಳನ್ನು ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು ಈ ಸಂಜೆಯೊಳಗೆ ಸಮಸ್ಯೆ ಪರಿಹರಿಸಿ ಬೆಳಗಿನ ವೇಳೆಯೊಳಗೆ ಡ್ರಿಲ್ಲಿಂಗ್ ಕಾರ್ಯ ಆರಂಭಿಸಬೇಕು. ಯಾವುದೇ ಶಾಸಕರು, ಸಚಿವರು ಅಧಿಕಾರಿಗಳಿಗಿಂತ ನಿಯಮಾವಳಿ ಮುಖ್ಯವಾದದ್ದು. ನಿಯಮಾವಳಿ ಅನ್ವಯ ಕೆಲಸಮಾಡಿ ಎಂದು ತಾಕೀತುಮಾಡಿದರು.
ಈ ಮೊದಲೇ ತಿಳಿಸಿದ ಹಾಗೆ ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಬೇಕು. ಈ ಕೊಳವೆಬಾವಿಗಳಲ್ಲಿ ಇಳುವರಿ ಕಡಿಮೆಯಾದರೆ ತಕ್ಷಣವೇ ಟ್ಯಾಂಕರ್ ಬಳಸಿ ನೀರು ಪೂರೈಸಿ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಬಾಡಿಗೆಗಳನ್ನು ಕಾಲಮಿತಿಯೊಳಗೆ ಪಾವತಿಸಬೇಕು ಎಂದು ಸೂಚಿಸಿದರು.


24 ತಾಸಿನಲ್ಲಿ ಮಾಹಿತಿ: ಕೊಳವೆಬಾವಿ ಕೊರೆಸುವುದು ಕೊನೆಯ ಆದ್ಯತೆಯಾಗಬೇಕು. ಅನಿವಾರ್ಯ ಸಂದರ್ಭದಲ್ಲಿ ಕೊಳವೆಬಾವಿ ಕೊರೆಸಬೇಕು. ಒಂದೊಮ್ಮೆ ಜನವಸತಿಯಿಂದ ಕೊಳವೆಬಾವಿಗಳು ದೂರದಲ್ಲಿದ್ದರೆ ಪೈಪ್‍ಲೈನ್ ಅಳವಡಿಸಲು ಟಾಸ್ಕಪೋರ್ಸ್ ಅಡಿ 1.5 ಲಕ್ಷ ರೂ.ವರೆಗೆ ಪಾವತಿಸಲು ಅವಕಾಶವಿದೆ. ಹೆಚ್ಚುವರಿ ಹಣಬೇಕಾದರೆ ಶಾಸಕರ ಅನುದಾನದಿಂದ ಭರಿಸಬೇಕು. ಒಂದೊಮ್ಮೆ ಈ ಹಣವೂ ಸಾಕಾಗಾಗದಿದ್ದರೆ ವಿಶೇಷ ಅನುದಾನದಕ್ಕೆ ಮನವಿ ಸಲ್ಲಿಸಿ ಇಂತಹ ಪ್ರಕರಣಗಳಲ್ಲಿ ಬೇಕಾದ ಅನುದಾನ ಕುರಿತಂತೆ ತಾಲೂಕುವಾರು ಅಗತ್ಯವಾದ ಅನುದಾನದ ವಿವರವನ್ನು 24 ತಾಸಿನೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ನರೇಗಾ ಅತೃಪ್ತಿ: ಜಿಲ್ಲೆಯಲ್ಲಿ ನರೇಗಾ ಕಾರ್ಯಕ್ರಮಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬುದು ಮಾಹಿತಿ ಲಭ್ಯವಾಗಿದೆ. ಶೇ.50ಕ್ಕಿಂತ ಕಡಿಮೆ ಪ್ರಗತಿ ಜಿಲ್ಲೆಯಲ್ಲಿದೆ. ಒಂದು ಪಂಚಾಯತಿಯಲ್ಲಿ ಕನಿಷ್ಟ ಒಂದು ಕೆಲಸ ನಡೆಯಬೇಕು. ಆದರೆ ಜಿಲ್ಲೆಯ ಬಹುಪಾಲು ಪಂಚಾಯತಿಗಳಲ್ಲಿ ಕಾಮಗಾರಿಯೇ ಆರಂಭಿಸಿಲ್ಲ. ಅಗತ್ಯವಿದ್ದರೆ ಪ್ರತಿ ಪಂಚಾಯತಿಯಲ್ಲಿ ಒಂದಕ್ಕಿಂತ ಹೆಚ್ಚುಕಾಮಗಾರಿ ಅರಂಭಿಸಿ. ಪ್ರತಿ ಕುಟುಂಬಕ್ಕೆ 100 ದಿನಗಳ ಬದಲಾಗಿ 150 ದಿನಗಳು ಕೆಲಸ ನೀಡಬೇಕು. ಹೆಚ್ಚಿನ ಬೇಡಿಕೆ ಇದ್ದರೆ ಬೇಡಿಕೆ ಸಲ್ಲಿಸಿದ ಎಲ್ಲರಿಗೂ ಕೆಲಸ ನೀಡಬೇಕು. ಯಾರೂ ಉದ್ಯೋಗ ಅರಿಸಿ ಗುಳೆ ಹೋಗಬಾರದು. ಕೆರೆ ಹೂಳೆತ್ತುವ ಕಾಮಗಾರಿ, ಜಲಮರುಪೂರಣ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೆಟಿರಿಯಲ್ ಕಾಂಪೋನೆಂಟ್‍ಗಿಂತ ಕೂಲಿ ಬಾಬ್ತು ಹೆಚ್ಚಿರುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ ಉದ್ಯೋಗ ಖಾತ್ರಿ ಯೋಜನೆಗಳನ್ನು ಚುರುಕುಗೊಳಿಸಬೇಕು. ಪ್ರತಿ ಹಳ್ಳಿಗಳಿಗೆ ಭೇಟಿ ನೀಡಬೇಕು, ಕೆಳ ಹಂತದ ಅಧಿಕಾರಿಗಳಿಗೆ ಕೆಲಸದಲ್ಲಿ ಚುರುಕು ಮುಟ್ಟಿಸಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ 72 ತಾಸಿನೊಳಗಾಗಿ ಉದ್ಯೋಗ ಖಾತ್ರಿ ಕೆಲಸ ಆರಂಭವಾಗಬೇಕು. ಈ ಕುರಿತಂತೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಮೇವು ಬ್ಯಾಂಕ್ ಕೊಡಿ: ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತಂತೆ ಮಾಹಿತಿ ಪಡೆದ ಸಚಿವ ಆರ್.ವಿ.ದೇಶಪಾಂಡೆ ಅವರು ಮುಂದಿನ 21 ವಾರಗಳ ಕಾಲ ಮೇವಿನ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ ಎನ್ನುವುದಾದರೆ ಮೇವಿನ ಕಿಟ್‍ಗಳನ್ನು ನೀಡುವುದನ್ನು ನಿಲ್ಲಿಸಿ ಹಾಗೂ ಮೇವಿನ ಬ್ಯಾಂಕ್ ಬೇಡಿಕೆ ಬಂದ 48ತಾಸಿನೊಳಗೆ ಮೇವು ಬ್ಯಾಂಕ್ ಆರಂಭಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಬೀಜ- ಗೊಬ್ಬರ ಕೊರತೆಯಾಗದಿರಲಿ: ಈ ಬಾರಿಯ ಮುಂಗಾರು ಮಳೆ ಒಂದುವಾರ ವಿಳಂಬವಾಗುವ ಸಾಧ್ಯತೆ ಇದೆ. ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ರೈತ ಸಂಪರ್ಕ ಕೇಂದ್ರಗಳಲ್ಲಿ ಸಕಾಲಕ್ಕೆ ಲಭ್ಯವಾಗುವಂತೆ ಕ್ರಮಕೈಗೊಳ್ಳಿ. ಬೆಳೆ ಪರಿಹಾರ ಸಕಾಲದಲ್ಲಿ ತಲುಪುವಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಶಾಶ್ವತ ಕೆಲಸ: ಬರ ಪರಿಹಾರದಡಿ ಕೈಗೊಳ್ಳುತ್ತಿರುವ ಕಾಮಗಾರಿಗಳು ತಾತ್ಕಾಲಿಕವಾಗಿವೆ. ಕಳೆದ 15 ವರ್ಷಗಳಲ್ಲಿ ನಾಲ್ಕಾರುವರ್ಷ ಮಾತ್ರ ಮಳೆಯಾಗಿದೆ. ಉಳಿದಂತೆ ಸತತ ಬರಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಶಾಶ್ವತವಾಗಿ ಜನರಿಗೆ ಉದ್ಯೋಗ, ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಶಾಶ್ವತವಾದ ದೀರ್ಘವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಯೋಜನೆಯೊಂದನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಿಕೊಡಲು ಸಲಹೆ ನೀಡಿದರು.
ಕೆರೆಗಳ ನಿರ್ಮಾಣ, ನದಿ ಜೋಡಣೆ, ಸಣ್ಣ ಸಣ್ಣ ಚೆಕ್‍ಡ್ಯಾಂಗಳ ನಿರ್ಮಾಣ, ಜಲಸಂಗ್ರಹ ಯೋಜನೆಗಳು ಹಾಗೂ ಉದ್ಯೋಗ ಸೃಜನೆ ಯೋಜನೆಗಳ ಕುರಿತಂತೆ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದರು.
ಮಾಹಿತಿ ಸಂಗ್ರಹಿಸಿ: ಕುಡಿಯುವ ನೀರಿನ ಯೋಜನೆಗಳಿಗಾಗಿ ಕೊರೆಯಲಾದ ಕೊಳವೆಬಾವಿಗಳು, ಮೋಟರ್ ಜೋಡಣೆ, ಪೈಪ್‍ಲೈನ್ ಅಳವಡಿಕೆ ಹಾಗೂ ಈ ಯೋಜನೆಗಳ ಸಫಲತೆ ಹಾಗೂ ವಿಫಲತೆಗಳು ಹಾಗೂ ವಿಫಲ ಯೋಜನೆಗಳ ಮೋಟರ್ ಹಾಗೂ ಪೈಪ್‍ಗಳ ಪುನರ್ ಬಳಕೆ ಕುರಿತಂತೆ ಯೋಜನಾವಾರು, ಗ್ರಾಮವಾರು ಮಾಹಿತಿ ಸಂಗ್ರಹಿಸಿ 30ದಿನದೊಳಗಾಗಿ ಸಲ್ಲಿಸುವಂತೆ ಸೂಚಿಸಿದರು.
ಕುಡಿಯುವ ನೀರು ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಸಮಸ್ಯೆ ಕುರಿತಂತೆ ಸಭೆಯಲ್ಲಿ ಶಿಗ್ಗಾಂವ ಶಾಸಕ ಬಸವರಾಜ ಬೊಮ್ಮಾಯಿ, ಹಾವೇರಿ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಜಿಲ್ಲೆಯ ಬರಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಸಭೆಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿಗಳಾದ ತಿಪ್ಪೇಸ್ವಾಮಿ ಹಾಗೂ ಹರ್ಷಲ್ ನಾರಾಯಣ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.