ಕಿಮ್ಸ್​ ಮಗು ಪ್ರಕರಣ ! ಸತ್ಯಕ್ಕಾಗಿ ಬೆನ್ನಟ್ಟಿದ ಪೊಲೀಸರು

Share

ಶಿಶು ಕಳ್ಳತನವಾಗಿರುವ ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಶೀಘ್ರ ಸತ್ಯಾಂಶ ಹೊರಬೀಳುವ ವಿಶ್ವಾಸ ಇದೆ. ಅದುವರೆಗೆ ನಿಖರವಾಗಿ ಏನನ್ನೂ ಹೇಳಲು ಆಗುವುದಿಲ್ಲ. ಲಾಭೂರಾಮ ಹು-ಧಾ ಪೊಲೀಸ್​ ಆಯುಕ್ತ

ಹುಬ್ಬಳ್ಳಿ  ಜೂನ್ 16:  ಹುಬ್ಬಳ್ಳಿಯ  ಕಿಮ್ಸ್​ನಲ್ಲಿ ನವಜಾತ ಶಿಶು ಕಳ್ಳತನವಾಗಿದೆ ಎನ್ನುವ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ಈ ಪ್ರಕರಣದ ತನಿಖೆಗೆ ಪೊಲೀಸರ ಮೂರು ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣ ಬೆನ್ನಟ್ಟಿ ಹೋದ ತಂಡಕ್ಕೆ ಬೇಲಿಯೇ ಎದ್ದು ಹೊಲ ಮೇಯ್ದಿದೆ ಎನ್ನುವುದು ಗೊತ್ತಾಗಿದೆ. ಈ ಪ್ರಕರಣ ಸೂತ್ರಧಾರಿ ಮತ್ತ್ಯಾರೂ ಅಲ್ಲ, ಮಗುವಿನ ತಾಯಿ ಸಲ್ಮಾ ಹುಸೇನ್​ ಶೇಖ್!

ಸಲ್ಮಾ ಖುದ್ದಾಗಿ ಬಟ್ಟೆಯಲ್ಲಿ ಮಗುವನ್ನು ಸುತ್ತಿಕೊಂಡು ವಾರ್ಡ್​ನಿಂದ ಹೊರಕ್ಕೆ ತೆಗೆದುಕೊಂಡು ಹೋಗಿದ್ದಾಳೆ. ಬರುವಾಗ ಕೈಯಲ್ಲಿ ಬಟ್ಟೆ ಮಾತ್ರ ಇರುವುದು ಸಿಸಿಟಿವಿ ಫೂಟೇಜ್​ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸ್​ ಮೂಲಗಳು ಖಚಿತ ಪಡಿಸಿವೆ. ಇದಕ್ಕೂ ಮುನ್ನಾ ಸಲ್ಮಾ ಹೇಳಿದ ಕಟ್ಟುಕಥೆ ಬೆಚ್ಚಿಬೀಳಿಸುವಂತಿದೆ.

ಕುಂದಗೋಳ ನೆಹರು ನಗರದ ಸಲ್ಮಾ ಹುಸೇನ್​ ಶೇಖ್​ 40 ದಿನದ ಕೂಸಿನೊಂದಿಗೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ಬಂದಿದ್ದಳು. ಮಗುವಿನ ಮೆದುಳಿನಲ್ಲಿ ನೀರು ತುಂಬಿದೆ ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗುತ್ತೆ. “ಜೂನ್​ 13ರಂದು ಮಧ್ಯಾಹ್ನ 12.30ರ ಸುಮಾರಿಗೆ ಮಗು ಅಳುತ್ತಿದೆ ಎನ್ನುವ ಕಾರಣಕ್ಕೆ ವಾರ್ಡ್​ನಿಂದ ಹೊರಗಡೆ ಬಂದು ನಿಂತಿದ್ದೆ. ಆಗ ತನ್ನ ಮಡಿಲಲ್ಲಿದ್ದ ಮಗುವನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾದ” ಎಂದು ಸಲ್ಮಾ ರಾದ್ಧಾಂತ ಎಬ್ಬಿಸಿದ್ದಳು. ಭದ್ರತಾ ಸಿಬ್ಬಂದಿ ಮಗುವನ್ನು ಹುಡುಕಲು ಆರಂಭಿಸಿದ್ದರು. ಸುದ್ದಿ ತಿಳಿದು ಪೊಲೀಸರೂ ಸಲ್ಮಾಳಿಂದ ಮಾಹಿತಿ ಪಡೆದು ಪ್ರಕರಣದ ತನಿಖೆಗಾಗಿ ಮಹಾನಗರ ಪೊಲೀಸ್​ ಆಯುಕ್ತ ಲಾಭೂರಾಮ ಮೂರು ವಿಶೇಷ ತಂಡ ರಚಿಸಿದ್ದರು.

ಮಂಗಳವಾರ ಮಗು ಪತ್ತೆ: ಈ ವಿಚಾರ ತೀವ್ರ ಚರ್ಚೆಯಾಗುತ್ತಿದ್ದಂತೆ ಪೊಲೀಸರು ಕಿಮ್ಸ್​ನ ಮೂಲೆ ಮೂಲೆ ಹುಡುಕಲು ಆರಂಭಿಸಿದ್ದರು. 300ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳಿದ್ದು, ಅವುಗಳನ್ನೂ ಪರಿಶೀಲಿಸಿದ್ದರು. ಭದ್ರತಾ ಸಿಬ್ಬಂದಿ ಸೇರಿದಂತೆ ವಾರ್ಡ್​ನಲ್ಲಿದ್ದ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸ್​ ತನಿಖೆ ಚುರುಕಾಗಿದ್ದೇ ತಡ ಜೂನ್​ 14ರ ಬೆಳಗ್ಗೆ ಹೊತ್ತಿಗೆ ಕಳ್ಳತನವಾಗಿದ್ದ ಮಗು ಕಿಮ್ಸ್​ನ ಪಿಎಂಎಸ್​ಎಸ್​ವೈ ಕಟ್ಟಡದ ಲಾನ್​ನಲ್ಲಿ ಪತ್ತೆಯಾಗಿತ್ತು.

ಸಿಸಿಟಿವಿ ಫೂಟೇಜ್​ನಲ್ಲಿ ಏನಿದೆ?: ಮಗು ಸಿಕ್ಕ ಬಳಿಕ ಪ್ರಕರಣ ಸುಖಾಂತ್ಯ ಕಂಡಿತು ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರಾದರೂ ತನಿಖಾ ತಂಡ ಮಾತ್ರ ವಿರಮಿಸಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಇದರಲ್ಲಿ ಸೋಮವಾರ ಸ್ವತಃ ಸಲ್ಮಾ ಮಗುವನ್ನು ವಾರ್ಡ್​ನಿಂದ ಹೊರಗೆ ಕರೆದುಕೊಂಡು ಹೋಗಿದ್ದು ಗೊತ್ತಾಯಿತು. ವಾರ್ಡ್​ಗೆ ವಾಪಸ್​ ಬರುವಾಗ ಬಟ್ಟೆಯಷ್ಟೇ ಕೈಯಲ್ಲಿ ಇತ್ತು. ಪರಿಣಾಮ ಸಲ್ಮಾ ಹೇಳಿದ್ದು, ನಕಲಿ ಕಹಾನಿ ಎನ್ನುವುದು ಪೊಲೀಸರಿಗೆ ಗೊತ್ತಾಯಿತು. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ವಾರ್ಡ್​ ಮೇಲಿಂದ ಕೆಳಗೆ ಮಗುವನ್ನು ಬಿಸಾಕಿದ್ದಾಗಿ ಸಲ್ಮಾ ಹೇಳುತ್ತಾಳೆ. ಆದರೆ, ಸಲ್ಮಾ ಹೇಳಿದ ಮತ್ತೊಂದು ಕಟ್ಟುಕಥೆಯನ್ನು ಪೊಲೀಸರು ಕೇಳಲು ಸಿದ್ಧರಿರಲಿಲ್ಲ. ಏಕೆಂದರೆ ವಾರ್ಡ್​ನಿಂದ ಎಸೆದಿದ್ದೇ ಆದಲ್ಲಿ ಮಗು ಬದುಕುಳಿಯಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಮಗುವನ್ನು ಏಕೆ ಎಸೆದೆ? ಎಂದು ಪೊಲೀಸರು ಪ್ರಶ್ನಿಸಿದರೆ, ಸಲ್ಮಾ ಉತ್ತರ ನೀಡಲಿಲ್ಲ. ಸಲ್ಮಾ ಏಕೆ ಈ ಕಟ್ಟುಕಥೆ ರೂಪಿಸಿದಳು? ಮಗು ಆಕೆಗೆ ಬೇಡವಾಗಿತ್ತೇ? ಅಥವಾ ಮಾರಾಟಕ್ಕೆ ಸ್ವತಃ ಮುಂದಾಗಿದ್ದಳೇ? ಎಂಬಿತ್ಯಾದಿ ಸಂಗತಿಗಳು ಇನ್ನೂ ನಿಗೂಢವಾಗಿವೆ.

ಮಗು ಇಟ್ಟು ಹೋದವನು ಯಾರು?: ಜೂನ್​ 14ರಂದು ಬೆಳಗ್ಗೆ ಕಿಮ್ಸ್​ನ ಪಿಎಂಎಸ್​ಎಸ್​ವೈ ಕಟ್ಟಡದ ಲಾನ್​ನಲ್ಲಿ ಮಗುವನ್ನು ವ್ಯಕ್ತಿಯೊಬ್ಬ ಇಟ್ಟು ಹೋಗಿರುವುದೂ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ವ್ಯಕ್ತಿ ಯಾರು? ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಸಲ್ಮಾಳಿಗೆ ಸಂಪೂರ್ಣ ಮಾಹಿತಿ ಇದ್ದರೂ ಆಕೆ ವಿಚಾರಣೆಗೆ ಸಹಕರಿಸುತ್ತಿಲ್ಲ. ಕೂಲಂಕುಶ ತನಿಖೆ ಬಳಿಕವೇ ಅಸಲಿ ಕಹಾನಿ ಹೊರಬರಲಿದೆ.