ಕಾರಹುಣ್ಣಿಮೆ ಪೂಜೆಗೆ ಬಂದ ತಾಯಿ-ಮಕ್ಕಳಿಬ್ಬರು ಬಾವಿಗೆ ಆಹುತಿ!

Share

ತುಮಕೂರು, ಜೂನ 24: ಕಾರಹುಣ್ಣಿಮೆ ಪ್ರಯುಕ್ತ ಪೂಜೆಗೆಂದು ಗುರುವಾರ ಬೆಳ್ಳಂಬೆಳಗ್ಗೆ ತೋಟಕ್ಕೆ ತೆರಳಿದ್ದ ತಾಯಿ ಮತ್ತು ಮಕ್ಕಳಿಬ್ಬರು ತೆರೆದ ಬಾವಿಗೆ ಬಲಿಯಾದ ಘಟನೆ ತಿರುಮಲ ಪಾಳ್ಯದಲ್ಲಿ ನಡೆದಿದೆ.

ಹೇಮಲತಾ (34) ಮತ್ತು ಮಕ್ಕಳಾದ ಮಾನಸ(6), ಪೂರ್ವಿಕಾ(3) ಮೃತ ದುರ್ದೈವಿಗಳು. ಗುರುವಾರ ಬೆಳಗ್ಗೆ 7.30ರಲ್ಲಿ ಹೇಮಲತಾ ಮಕ್ಕಳೊಂದಿಗೆ ಕಾರ ಹುಣ್ಣಿಮೆ ಪ್ರಯುಕ್ತ ತುಳಸಿಪುರ ಗ್ರಾಮ ವ್ಯಾಪ್ತಿಯಲ್ಲಿನ ತಮ್ಮ ಅಡಕೆ ತೋಟಕ್ಕೆ ಪೂಜೆಗೆ ತೆರಳಿದ್ದರು.

ಈ ವೇಳೆ ಮಕ್ಕಳು ಬಾವಿ ಬದಿಯಲ್ಲಿದ್ದ ಸೀಬೆಮರದಲ್ಲಿ ಹಣ್ಣು ಕೀಳಲು ಹೋಗಿ ಬಾವಿಗೆ ಜಾರಿ ಬಿದ್ದಿದ್ದಾರೆ. ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ ತಾಯಿ ಕೂಡ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಹುಣ್ಣಿಮೆ ದಿನದಂದೇ ನಡೆದ ಈ ಅವಘಡಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.