ರಾಜ್ಯಪಾಲರಾಗಿ ನೇಮಕವಾದ ಬಳಿಕ ಥಾವರ್ ಚಂದ್ ಪ್ರತಿಕ್ರಿಯೆ

Share

ಬೆಂಗಳೂರು, ಜುಲೈ 6: ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಥಾವರ್ ಚಂದ್ ಗೆಹ್ಲೋಟ್ ತಮ್ಮ ನೇಮಕಾತಿ ಕುರಿತಂತೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ 73 ವರ್ಷದ ಥಾವರ್ ಚಂದ್ ಸದ್ಯ ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತು ಕರ್ನಾಟಕದ ರಾಜಭವನದತ್ತ ಮುಖ ಮಾಡಲು ಸಜ್ಜಾಗುತ್ತಿದ್ದಾರೆ.

ಕರ್ನಾಟಕದ ನಿಯೋಜಿತ ರಾಜ್ಯಪಾಲ ಥಾವರ್ ಚಂದ್ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಮಾತನಾಡಿ , ”ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಿ ಮೋದಿ, ನನ್ನ ಮೇಲೆ ವಿಶ್ವಾಸವಿರಿಸಿ ಕರ್ನಾಟಕದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನನ್ನ ಹುದ್ದೆಯನ್ನು ವಿಶ್ವಾಸಾರ್ಹವಾಗಿ ನಿಭಾಯಿಸುತ್ತೇನೆ. ಸಾಂವಿಧಾನಿಕ ಮಿತಿ ಹಾಗೂ ರಾಜ್ಯಾಡಳಿತ ನಡುವಿನ ಬಿಕ್ಕಟ್ಟು ಉಪಶಮನಕ್ಕೆ ಯತ್ನಿಸುತ್ತೇನೆ” ಎಂದಿದ್ದಾರೆ.

ಮಧ್ಯಪ್ರದೇಶ ರಾಜ್ಯದ ನಾಗ್ಡಾ ಜಿಲ್ಲೆಯಲ್ಲಿ ಜನಿಸಿದ ಥಾವರ್ ಚಂದ್ ಗೆಹ್ಲೋಟ್ ದಲಿತ ಸಮುದಾಯಕ್ಕೆ ಸೇರಿದವರು. ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಕರ್ನಾಟಕದ 35ನೇ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.