ಚಾಮರಾಜನಗರ, ಜೂನ 30: ರಾಜ್ಯದ ಹಿಂದುಳಿದ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ವಿಶ್ವ ವಿದ್ಯಾಲಯ ತಲೆ ಎತ್ತಲಿದೆ.
ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಬೇಕೆಂಬುದು ಜಿಲ್ಲೆಯ ಶಿಕ್ಷಣ ತಜ್ಞರ, ವಿದ್ಯಾರ್ಥಿಗಳ, ಶಿಕ್ಷಕ ವೃಂದದ ಬಹುವರ್ಷಗಳ ಕನಸಾಗಿತ್ತು. ಇದೀಗ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 55 ಎಕರೆ ಪ್ರದೇಶದಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ.
ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಹೇಮಂತ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಇನ್ನು 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ. ಸಮಿತಿ ಸದಸ್ಯರು ನಾಳೆ (ಗುರುವಾರ) ಮೊದಲ ಬಾರಿಗೆ ಸಭೆ ಸೇರಿ ಈ ವಿಚಾರವಾಗಿ ಚರ್ಚಿಸಲಿದ್ದಾರೆ.
ದಶಕದ ನಂತರವಾದರೂ ಸರ್ಕಾರ ಈ ಬೇಡಿಕೆ ಈಡೇರಿಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಇದರಿಂದಾಗಿ ಜಿಲ್ಲೆಯ ಯುವ ಜನಾಂಗಕ್ಕೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಹೆಚ್ಚಾಗಿವೆ.